ಜಗಳೂರು, ಡಿ.25 – ಸಿರಿಗೆರೆ ಶ್ರೀಗಳ ಆಶೀರ್ವಾದ ಹಾಗೂ ಏಸು ಕ್ರಿಸ್ತರ ಕೃಪೆಯಿಂದ ತಾಲ್ಲೂಕಿನ 57 ಕೆರೆಗಳಿಗೆ ಮಳೆಗಾಲದಲ್ಲಿ ನೀರು ಬರುವ ಮೂಲಕ ಬರದ ನಾಡು ಹಸಿರು ನಾಡಾಗ ಲಿದೆ ಎಂದು ಶ್ರೀ ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಎಸ್.ವಿ.ರಾಮಚಂದ್ರ ಹೇಳಿದ್ದಾರೆ.
ಪಟ್ಟಣದ ಪ್ರೇರಣಾ ಸಮಾಜದ ಸೇವಾ ಸಂಸ್ಥೆಯ ಚರ್ಚ್ ಆವರಣದಲ್ಲಿ ಇಂದು ಹಮ್ಮಿಕೊಂಡಿದ್ದ `ಕ್ರಿಸ್ತ ಜಯಂತಿ – 2020′ ಸರ್ವಧರ್ಮ ಸಮನ್ವಯ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ತಾಲ್ಲೂಕಿನ ವ್ಯಾಸಗೊಂಡನಹಳ್ಳಿ ಹತ್ತಿರ ಜವಳಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಇಲ್ಲಿನ ಜನರಿಗೆ ಉದ್ಯೋಗ ಕಲ್ಪಿಸಿಕೊಡಲಾಗುವುದು. ಮಾಚಿಕೆರೆಯ ಸ್ವಸಹಾಯ ಸಂಘದ 20 ಮಹಿಳೆಯರಿಗೆ ಟೈಲರಿಂಗ್ ಯಂತ್ರ ನೀಡುತ್ತೇನೆ ಎಂದು ಭರವಸೆ ನೀಡಿದರು.
2013ರಲ್ಲಿ ದಾವಣಗೆರೆಯಲ್ಲಿ ಏಸು ಕ್ರಿಸ್ತನ ಪ್ರತಿಮೆಯನ್ನು ಮಾಡಿಸಿಕೊಟ್ಟಿ ದ್ದೇನೆ. ಕ್ರೈಸ್ತ ಸಮಾಜ ಪ್ರೀತಿಯಿಂದ ಕಾಣುವ ಸಮಾಜವಾಗಿದೆ. ಎಲ್ಲಾ ಧರ್ಮದವರನ್ನು ಕರೆಸಿ ಸರ್ವಧರ್ಮ ಕಾರ್ಯಕ್ರಮ ಮಾಡಿ, ಶಾಂತಿ ಸಂದೇಶ ನೀಡುವ ಮೂಲಕ ನಾವೆಲ್ಲರೂ ಒಂದೇ ಎಂಬ ಸಂದೇಶ ನೀಡಿದ್ದಾರೆ. ಚರ್ಚ್ ಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಮಾಡಿಕೊಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.
ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಮಾತನಾಡಿ, ಇಂದು ಸ್ವಾರ್ಥ ಜೀವನದಿಂದ ಅಶಾಂತಿ ಉಂಟಾಗಿದೆ. ಶಾಂತಿ ಉಂಟಾಗಬೇಕಾದರೆ ಹಿಂದೂ, ಕ್ರೈಸ್ತ, ಮುಸ್ಲಿಂ ಸೇರಿದಂತೆ ಹಲವು ಧರ್ಮಗಳಿದ್ದರೂ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಬೇಕು ಎಂದವರು ಅಭಿಪ್ರಾಯ ಪಟ್ಟರು.
ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಮೌಲಾನ ಮಹಮ್ಮದ್ ಅಹಮ್ಮದ್ ಸಾಬ್, ಮೌಂಟ್ ಕಾರ್ಮೆಲ್ ಶಾಲೆ ಶಿವಮೊಗ್ಗದ ವ್ಯವಸ್ಥಾಪಕ ವಂ.ಫಾ.ಜೆರೊಮ್ ಮೊರಸ್ ಅವರು ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಗಳೂರು ಪ್ರೇರಣಾ ಸಮಾಜದ ಸೇವಾ ಸಂಸ್ಥೆ ಚರ್ಚ್ ನ ಉಪ ನಿರ್ದೇಶಕ ಫಾದರ್ ಸುನಿಲ್ ಡಿಸೋಜಾ ಓಸಿಡಿ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಮುಖ್ಯ ಅತಿಥಿ ಗಳಾಗಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಬ್ರಹ್ಮಾಕುಮಾರಿ ಭಾರತಿ, ಜಗಳೂರು ಪ್ರೇರಣಾ ಸಮಾಜದ ಸೇವಾ ಸಂಸ್ಥೆ ಚರ್ಚ್ ನಿರ್ದೇಶಕ ವಿಲಿಯಂ ಮಿರಾಂದ, ಪಟ್ಟಣ ಪಂಚಾಯಿತಿ ಉಪಾ ಧ್ಯಕ್ಷೆ ಲಲಿತಾ ಶಿವಣ್ಣ, ತಾ.ಕಾ.ನಿ.ಪ. ಸಂಘದ ಅಧ್ಯಕ್ಷ ಜಿ.ಎಸ್. ಚಿದಾನಂದ, ತಾಲ್ಲೂಕು ಆರೋಗ್ಯಾಧಿಕಾರಿ ಜೆ.ನಾಗ ರಾಜ, ಯೋಜನಾಧಿಕಾರಿ ಗುಣಕಾರ್, ಲಯನ್ಸ್ ಕ್ಲಬ್ ಅಧ್ಯಕ್ಷೆ ಶಾಹಿನಾ ಬೇಗಂ, ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಕರವೇ ಅಧ್ಯಕ್ಷ ಮಹಾಂತೇಶ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಪಿ.ಎಸ್.ಅರವಿಂದನ್, ಪ್ರಕೃತಿ ಯೋಗ ಚಿಕಿತ್ಸಾಲಯದ ವೈದ್ಯ ಡಾ|| ಶ್ವೇತಾ ಎಸ್.ಬೆಲಗಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.