ಜೀವದಾನಕ್ಕಾಗಿ ರಕ್ತದಾನ ಮಾಡಲು ಕರೆ

 ಹರಪನಹಳ್ಳಿ, ಡಿ.24- ಜಾತಿ, ಧರ್ಮವನ್ನು ಮರೆತು ಜೀವದಾನಕ್ಕಾಗಿ ರಕ್ತದಾನ ಮಾಡುವುದು ಮಾನವ ಧರ್ಮದ ಶ್ರೇಷ್ಟತೆಯನ್ನು ತೋರುತ್ತದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಶ್ರೀಮತಿ ಎಂ.ಪಿ. ವೀಣಾ ಮಹಾಂತೇಶ್ ಹೇಳಿದರು. 

ಪಟ್ಟಣದ ಹೊಸಪೇಟೆ ರಸ್ತೆಯಲ್ಲಿರುವ ಸಂಪೂರ್ಣ ಸುವಾರ್ತಾ ಚರ್ಚ್‍ನಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸೇವಾ ಮನೋಭಾವಕ್ಕೆ ಧರ್ಮ ಅಡ್ಡಿಯಲ್ಲ. ಧರ್ಮಗಳು ಮನುಷ್ಯ ಮನುಷ್ಯನನ್ನು ಪ್ರೀತಿಸುವಂತೆ ಹೇಳುತ್ತವೆಯೇ ಹೊರತು, ದ್ವೇಷಿಸುವುದಕ್ಕಲ್ಲ. ರಕ್ತದಾನದೊಂದಿಗೆ ನೇತ್ರ ಹಾಗೂ ಅಂಗಾಂಗ ದಾನಗಳನ್ನು ಮಾಡುವ ಮನಸ್ಥಿತಿ ಹೆಚ್ಚಾಗಬೇಕಿದೆ. ಆಗ ಮಾತ್ರ ಮಾನವ ಜನ್ಮಕ್ಕೆ ಸಾರ್ಥಕತೆ ಬರುವುದು. ತಾಳ್ಮೆ ಹಾಗೂ ಸಹಕಾರ ಮನೋಭಾವದ ಯೇಸುವಿನ ಜನ್ಮ ದಿನಕ್ಕಾಗಿ  ಹಮ್ಮಿಕೊಂಡಿರುವ ರಕ್ತದಾನ ಶಿಬಿರ ಅತ್ಯಂತ ಸ್ಮರಣೀಯವಾಗಿದೆ ಎಂದರು.

 ಪುರಸಭೆ ಸದಸ್ಯ ಹರಾಳ್ ಹೆಚ್.ಎಂ. ಅಶೋಕ್ ಮಾತನಾಡಿ, ಸೇವಾ ಮನೋಭಾವ ಕೇವಲ ಭಾವನೆಯಾಗಿದೆ. ರಕ್ತದಾನದ ಮೂಲಕ ಸೇವೆ ಆರಂಭವಾಗಬೇಕಿದೆ. ಕೋವಿಡ್ ಸಮಯದಲ್ಲಿ ರಕ್ತದಾನಕ್ಕೆ ಮುಂದಾಗುವ ದಾನಿಗಳ ಜೀವನ ಶ್ರೇಷ್ಟತೆಯನ್ನು ಸೂಚಿಸುತ್ತದೆ ಎಂದರು. ಚರ್ಚ್‍ನ ಫಾದರ್ ನೀಲ್ ಆರ್ಮಸ್ಟ್ರಾಂಗ್ ಮಾತನಾಡಿ, ಪ್ರತಿ ಆರು ತಿಂಗಳಿಗೊಮ್ಮೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು ಎಂದರು. 

ಪುರಸಭೆ ಮಾಜಿ ಅಧ್ಯಕ್ಷರಾದ ಕವಿತಾ ವಾಗೀಶ್, ತಾಲ್ಲೂಕು ವೈದ್ಯಾಧಿಕಾರಿ ವೆಂಕಟೇಶ್, ಹೆಚ್‍ಐವಿ ಆಪ್ತಸಮಾಲೋಚಕ ಮಲ್ಲಿಕಾರ್ಜುನಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

error: Content is protected !!