ಸಾಣೇಹಳ್ಳಿ, ಆ.4- ವಚನಕಾರರು ಜ್ಞಾನ ಮತ್ತು ಕ್ರಿಯೆಗೆ ಸಮಾನ ಮಹತ್ವ ನೀಡಿದ್ದಾರೆ. ಜ್ಞಾನವಿಲ್ಲದ ಕ್ರಿಯೆ, ಕ್ರಿಯೆ ಇಲ್ಲದ ಜ್ಞಾನ ವ್ಯರ್ಥ ಎನ್ನುವರು. ನಮ್ಮಲ್ಲಿ ಜ್ಞಾನವಂತರಿಗೆ ಕೊರತೆ ಇಲ್ಲ. ಪುಂಖಾನುಪುಂಖವಾಗಿ ಉಪದೇಶ ಮಾಡುವರು. ಆದರೆ ಒಳಹೊಕ್ಕು ನೋಡಿದರೆ ಅವರ ನಡವಳಿಕೆ ಮಾತಿಗೆ ತಕ್ಕಂತೆ ಇರುವುದಿಲ್ಲ. ಮಾತೇ ಒಂದು, ಮನಸ್ಸೇ ಒಂದು, ಕೃತಿಯೇ ಮತ್ತೊಂದು. ಇಂಥವರು ಎಷ್ಟೇ ಪದವಿ, ಪ್ರಶಸ್ತಿ ಪಡೆದಿದ್ದರೂ ಅಜ್ಞಾನಿಗಳೇ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ನುಡಿದರು.
ಸಾಣೇಹಳ್ಳಿ ಶ್ರೀಮಠದಿಂದ ಆಯೋಜನೆಗೊಂಡಿರುವ `ಮತ್ತೆ ಕಲ್ಯಾಣ ಅಂತರ್ಜಾಲ ಉಪನ್ಯಾಸ ಮಾಲಿಕೆ’ಯ ಎರಡನೆಯ ದಿನದ ಕಾರ್ಯಕ್ರಮದಲ್ಲಿ ಶ್ರೀಗಳು §ವಚನ ಚಳುವಳಿಯ ಪ್ರಸ್ತುತತೆ ಮತ್ತು ವೈಶಿಷ್ಟ್ಯತೆ¬ ವಿಷಯ ಕುರಿತು ಮಾತನಾಡಿದರು.
ಜಗತ್ತಿನ ಧರ್ಮಗಳಲ್ಲಿ ಕೆಲವು ಭಕ್ತಿ ಪ್ರಧಾನವಾದವು, ನೀತಿ ಪ್ರಧಾನವಾದವು, ಜ್ಞಾನ ಪ್ರಧಾನವಾದವು, ಕರ್ಮ ಪ್ರಧಾನವಾದವು. ವಚನಕಾರರ ಧರ್ಮ ಇವೆಲ್ಲವುಗಳನ್ನು ಒಳಗೊಂಡು ಇವುಗಳಿಗಿಂತ ಭಿನ್ನವಾಗಿ ತೋರುವುದು. ಶರಣರು ಬಾಹ್ಯ ಬದುಕಿನ ಶುದ್ಧಿಯ ಜೊತೆಗೆ ಅಂತರಿಕ ಬದುಕಿನ ಶುದ್ಧಿಗೆ ಒತ್ತು ಕೊಟ್ಟರು. ಆಂತರಿಕ ಬದುಕಿನ ಶುದ್ಧಿಯಿಲ್ಲದೆ ಬಾಹ್ಯ ಬದುಕಿನ ಶುದ್ಧಿಗೆ ಬೆಲೆ ಇರುವುದಿಲ್ಲ. ಅಂತರಂಗದ ಬದುಕಿನ ಶುದ್ಧಿಗೆ ಬಸವಣ್ಣನವರು ಹೇಳುವುದು `ಕಳಬೇಡ, ಕೊಲಬೇಡ’ ಎನ್ನುವ ಸಪ್ತಶೀಲಗಳ ಆಚರಣೆಯನ್ನು. ಸಪ್ತಶೀಲಗಳ ಅನುಷ್ಠಾನಕ್ಕೆ ಅನುಭಾವಿಗಳ ಸಂಗದ ಅವಶ್ಯಕತೆಯೂ ಇದೆ ಎಂದರು.
ಬೇಧ – ಭಾವವಿಲ್ಲದ ಕೊರೊನಾ
ಕೊರೊನಾ ಎಲ್ಲೆಡೆ ವ್ಯಾಪಿಸುತ್ತಿದೆ. ಅದಕ್ಕೆ ಜಾತಿ, ಅಂತಸ್ತು, ಸ್ಥಾನಮಾನಗಳ ಭೇದವಿಲ್ಲ. ಕೂಲಿಕಾರ, ಕೃಷಿಕ, ಕಾರ್ಮಿಕ, ಅಧಿಕಾರಿ, ಶಾಸಕ, ವೃದ್ಯ, ಪೋಲಿಸ್, ಮಠಾಧಿಪತಿ, ಮಂತ್ರಿ, ಮುಖ್ಯಮಂತ್ರಿ, ಆಡಳಿತ ಪಕ್ಷ, ವಿರೋಧ ಪಕ್ಷ ಎನ್ನುವ ತಾರತಮ್ಯ ಇಲ್ಲ. ಎಲ್ಲಾ ವರ್ಗದವರನ್ನು ಸಮಾನವಾಗಿ ಆವರಿಸಿಕೊಳ್ಳು ತ್ತಿದೆ. ಕೆಲವರ ಪ್ರಾಣವನ್ನೂ ಕಿತ್ತುಕೊಂಡಿದೆ.
ಜನರು ಬೇಜವಾಬ್ದಾರಿಯಿಂದ ವರ್ತಿಸದೆ ಅಂತರ ಕಾಯ್ದುಕೊಂಡು, ಮುಖಕ್ಕೆ ಮಾಸ್ಕ್ ಧರಿಸಿಕೊಂಡು ತಮ್ಮ ತಮ್ಮ ಕಾಯಕದಲ್ಲಿ ನಿರತರಾಗಬೇಕು. ಅಗತ್ಯವಿದ್ದರೆ ಮಾತ್ರ ಹೊರಗೆ ಹೋಗಬೇಕು. ಕೊರೊನಾ ಬಂತೆಂದು ಭಯಪಡಬೇಕಿಲ್ಲ. ಅದನ್ನು ಧೈರ್ಯದಿಂದ ಎದುರಿಸಬೇಕು. ಅದೇನು ವಾಸಿಯಾಗದ ಕಾಯಿಲೆ ಖಂಡಿತಾ ಅಲ್ಲ. ಹಾಗಂತ ರೋಗ ಲಕ್ಷಣ ಕಾಣಿಸಿಕೊಂಡರೂ ಚಿಕಿತ್ಸೆ ಪಡೆಯದೆ ತಿರುಗಾಡಿ ನಿರೋಗಿಗಳಿಗೂ ರೋಗ ಅಂಟಿಸಬಾರದು. ಈ ಎಚ್ಚರಿಕೆ ಪ್ರತಿಯೊಬ್ಬರಿಗೂ ಇರಬೇಕು.
– ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ವಚನ ಚಳುವಳಿಯ ಪ್ರಸ್ತುತತೆ ಮತ್ತು ವೈಶಿಷ್ಟ್ಯತೆ ಕುರಿತಂತೆ ರಾಣೇಬೆನ್ನೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರಾದ ಡಾ. ಶೋಭಾ ಸಾಹುಕಾರ್ ಮಾತನಾಡಿ ಕರ್ನಾಟಕದ ಇತಿಹಾಸದಲ್ಲಿ ವಚನ ಚಳುವಳಿ ಶ್ರೇಷ್ಠ, ಅಪೂರ್ವ ಮತ್ತು ಸಮಗ್ರ ಸಮಾಜೋದ್ಧಾರ್ಮಿಕ ಚಳುವಳಿಯಾಗಿದೆ. ವಚನಕಾರರು ಆದರ್ಶ ಸಮ ಸಮಾಜವನ್ನು ನಿರ್ಮಿಸಬಯಸಿದ್ದರು. ಈ ನಿಟ್ಟಿನಲ್ಲಿನ ಅವರ ಸತತ ಪ್ರಯತ್ನವೇ ವಚನ ಚಳುವಳಿ. ಆದರೆ ಇಂಥ ಚಳುವಳಿಯನ್ನು ಪ್ರಗತಿಪರ ವಿರೋಧಿಗಳು ಹತ್ತಿಕ್ಕುವ ಪ್ರಯತ್ನ ಮಾಡಿದರು. ಎಷ್ಟೇ ಕಷ್ಟಗಳು ಬಂದರೂ ಅವುಗಳನ್ನು ಲೆಕ್ಕಿಸದೆ ಬಸವಾದಿ ಶರಣರು ತಮ್ಮ ಪ್ರಯತ್ನದಲ್ಲಿ ಮುಂದುವರಿದರು ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ಕೆ. ಜ್ಯೋತಿ, ಕೆ. ದಾಕ್ಷಾಯಣಿ ಮತ್ತು ಹೆಚ್.ಎಸ್. ನಾಗರಾಜ್, ತಬಲಾ ಸಾಥಿ ಶರಣ್ಕುಮಾರ್ ಸುಶ್ರಾವ್ಯವಾಗಿ ವಚನ ಗೀತೆಗಳನ್ನು ಹಾಡಿದರು. ಬೀರೂರಿನ ಗೌರಿ ಪ್ರಸನ್ನ ಸ್ವಾಗತಿಸಿದರು. ಶಿವಮೊಗ್ಗದ ಅಡಿಕೆ ವ್ಯಾಪಾರಿ ಓಂಕಾರಪ್ಪ ಕಾರ್ಯಕ್ರಮದ ದಾಸೋಹಿಗಳಾಗಿದ್ದರು.