ಶಿಕ್ಷಣ ಸಂಸ್ಥೆಗಳು ವ್ಯಾಪಾರೀ ಕೇಂದ್ರಗಳಾಗದೆ, ಮಕ್ಕಳಿಗೆ ವಿದ್ಯಾರ್ಜನೆ ನೀಡುವ ಕೇಂದ್ರಗಳಾಗಬೇಕು

ಹರಪನಹಳ್ಳಿ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಆರ್.ನಾಗರಾಜಪ್ಪ

ಹರಪನಹಳ್ಳಿ, ಅ. 27 – ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣ ಮಾಡುವ ಕೇಂದ್ರಗಳಾಗದೆ ಮಕ್ಕಳಿಗೆ ವಿದ್ಯಾರ್ಜನೆ ನೀಡುವ ಕೇಂದ್ರಗಳಾಗಬೇಕು ಎಂದು ಬಳ್ಳಾರಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಆರ್.ನಾಗರಾಜಪ್ಪ ಆಶಯ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಟ್ಟಣದ ವಿಜ್ಞಾನ ವಿಭಾಗ, ಕಲಾ ವಿಭಾಗ ಹಾಗೂ ವಾಣಿಜ್ಯ ವಿಭಾಗದ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಜೊತೆಗೆ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ನೀಡುವ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಬೋಧಿಸಲು ಇರುವ ಮಾರ್ಗೋಪಾಯಗಳ ಕುರಿತು ಸಭೆ ನಡೆಸಿದ ಬಳಿಕ ಖಾಸಗಿ ಶಿಕ್ಷಣ ಸಂಸ್ಥೆಗಳು ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಕೋವಿಡ್ ವೇಳೆ ಸರ್ಕಾರ ನಿಗದಿತ ಶುಲ್ಕಕ್ಕಿಂತ ಕಡಿಮೆ ಶುಲ್ಕ ತೆಗೆದುಕೊಳ್ಳಬೇಕು ಎಂದು ಆದೇಶ ಹೊರಡಿಸಿದೆ. ಆದರೂ ಕೂಡ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂಬ ದೂರು ಬಂದಿದ್ದು ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ  ಕ್ರಮ ವಹಿಸಲಾಗುವುದು ಎಂದರು.

ಖಾಸಗಿ ಶಿಕ್ಷಣ ಸಂಸ್ಥೆಗಳು ಕೋವಿಡ್‌ನಿಂ ದಾಗಿ ಸಂಕಷ್ಟದಲ್ಲಿರುವ ಅರೆಕಾಲಿಕ ಉಪನ್ಯಾ ಸಕರುಗಳಿಗೆ ಮಾನವೀಯತೆಯ ಆಧಾರದ ಮೇಲೆ ನೆರವು ನೀಡಬೇಕು. ಕಾಲೇಜಿನ ಶೈಕ್ಷಣಿಕ ಪ್ರಗತಿಗೆ ಅರೆಕಾಲಿಕ ಉಪನ್ಯಾಸಕರೂ ಸಹ ಶ್ರಮ ವಹಿಸುತ್ತಾರೆ ಆದರೆ ಕೊವೀಡ್ 19 ನಿಂದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅರೆಕಾಲಿಕ ಉಪನ್ಯಾಸಕರುಗಳಾಗಿ ಸೇವೆ ಸಲ್ಲಿಸುತ್ತಿರುವವರ ಬದುಕು ಕಷ್ಟಕರವಾಗಿದ್ದು, ಅಂತಹ ಅರೆಕಾಲಿಕ ಉಪನ್ಯಾಸಕರ ನೆರವಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾನವೀಯತೆಯ ಆಧಾರದ ಮೇಲೆ ನೆರವು ನೀಡಬೇಕು ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮನವಿ ಮಾಡಿದರು.

ಆನ್‍ಲೈನ್ ತರಗತಿಗಳಲ್ಲಿ ವಿದ್ಯಾರ್ಥಿಗಳು ಕಲಿಕೆಗೆ ಪೂರಕವಾದ ಅಂಶಗಳನ್ನು ಮಾತ್ರ ತೆಗೆದು ಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಬದಲಿಗೆ ಮೊಬೈಲ್‍ನಲ್ಲಿ ಅನ್ಯ ವಿಷಯಗಳತ್ತ ಗಮನ ಹರಿಸಿ ಅಡ್ಡದಾರಿ ಹಿಡಿಯ ಬಾರದು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಈ ವೇಳೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಪ್ರಸಾದ್‍ಶಾಸ್ತ್ರಿ, ಬಂಗಿ ಬಸಪ್ಪ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಎ.ವಿ.ಅರುಣ್‍ಕುಮಾರ್, ಎಸ್‍ಯುಜೆಎಂ ಕಾಲೇಜಿನ ಪ್ರಾಚಾರ್ಯರ ಹೆಚ್.ಬಿ.ಸೋಮರೆಡ್ಡಿ, ನಿಸರ್ಗ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಆರ್.ಎಚ್.ಕಲ್ಯಾಣದವರ್, ರೇಣುಕ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಚೌಡಪ್ಪ, ಉಪನ್ಯಾಸ ಕರುಗಳಾದ ಹೆಚ್.ಮಲ್ಲಿಕಾರ್ಜುನ್, ಕೃಷ್ಣ ಮೂರ್ತಿ, ಆತ್ಮಾನಂದ, ವೀರಣ್ಣ, ಎಂ.ಮಲ್ಲಿ ಕಾರ್ಜುನ, ಪ್ರಕಾಶ್, ಬಸವರಾಜು, ಕೆ.ಬಿ. ರವೀಂದ್ರ ಸೇರಿದಂತೆ ಮತ್ತಿತರರು ಇದ್ದರು.

error: Content is protected !!