ಸಮಾಜದ ಮರು ನಿರ್ಮಾಣಕ್ಕೆ ಯುವಕರನ್ನು ಸಜ್ಜುಗೊಳಿಸಿ : ಶ್ರೀ

ಮಲೇಬೆನ್ನೂರು, ಅ. 16- ಸಮಾನತೆಯ ತತ್ವದ ಆಧಾರದ ಮೇಲೆ ಸಮಾಜವನ್ನು ಮರು ನಿರ್ಮಾಣ ಮಾಡಲು ಸಂವೇದನಾಶೀಲ ಯುವಜನರನ್ನು ಸಜ್ಜುಗೊಳಿಸಲು ಹೆಚ್ಚು ಹೆಚ್ಚು ತರಬೇತಿ ಕಾರ್ಯಾಗಾರಗಳನ್ನು ಇವತ್ತು ನಡೆಸಬೇಕಿದೆ ಎಂದು ಚಿತ್ರದುರ್ಗದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು

ಅವರು ಶುಕ್ರವಾರ ಹನಗವಾಡಿ ಸಮೀಪದ ಪ್ರೊ, ಕೃಷ್ಣಪ್ಪ ಸಾಂಸ್ಕೃತಿಕ ಭವನದಲ್ಲಿ ವಿದ್ಯಾರ್ಥಿ ಬಂಧುತ್ವ ವೇದಿಕೆ ವತಿಯಿಂದ 3 ದಿನಗಳ ಕಾಲ ಯುವಜನರಿಗಾಗಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಅಧ್ಯಯನ ಶಿಬಿರವನ್ನು ಸಂವಿಧಾನದ ಪೀಠಿಕೆ ಓದುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಅಧ್ಯಯನ ವಿಲ್ಲದೇ, ಅನುಭವವಿ ಲ್ಲದೇ, ನಾಯಕರಾಗಲು ಸಾಧ್ಯವಿಲ್ಲ. ನಾಯಕತ್ವ ಅನ್ನೋದು ಸುಖ ಕೊಡುವಂಥದ್ದಲ್ಲ. ನಾಯಕತ್ವದ ಕುರ್ಚಿ ಬಂಗಾರದ ಸಿಂಹಾಸನವಲ್ಲ. ಸುಖದ ಸುಪ್ಪತ್ತಿಗೆ ಯಲ್ಲ. ಸಮಸ್ಯೆಗಳ ಸಾಗರವನ್ನು ಈಸಬಲ್ಲವರು ನಾಯಕರಾಗುತ್ತಾರೆ ಎಂದು ಸ್ವಾಮೀಜಿ  ಹೇಳಿದರು.

ಬುದ್ದ ನಮ್ಮ ನಾಯಕ. ಬಸವಣ್ಣ ನಮ್ಮ ನಾಯಕ, ಪೆರಿಯಾರ್ ನಮ್ಮ ನಾಯಕ, ಅಂಬೇಡ್ಕರ್ ನಮ್ಮ ನಾಯಕರು.  ಸಮಸ್ಯೆಗಳ ಸಿಕ್ಕುಗಳನ್ನು ಲೀಲಾಜಾಲವಾಗಿ ಬಿಡಿಸುತ್ತಿದ್ದರು. ಹೀಗಾಗಿ ಇವರೆಲ್ಲ ನಾಯಕರಾದರು. ಇವರೆಲ್ಲ ಜನರ ಮನಸ್ಸನ್ನು ಕಟ್ಟಿಹಾಕುವ  ಸಂಪ್ರದಾಯಗಳ ವಿರುದ್ದ ಕೆಲಸ ಮಾಡಿದರು.

ಇಂತವರ ಹಾದಿಯಲ್ಲಿ ನಡೆಯುವ ನಾಯಕರ ಅಗತ್ಯತೆ ಇಂದಿದೆ. ಆದ್ದರಿಂದ ಇಂಥ ಶಿಬಿರಗಳು ಹೆಚ್ಚು ಹೆಚ್ಚು  ನಡೆಯಬೇಕಿದೆ ಎಂದು ಸ್ವಾಮೀಜಿ ಆಶಿಸಿದರು, 

ಶಾಸಕ ಎಸ್. ರಾಮಪ್ಪ ಮಾತನಾಡಿ, ಇವತ್ತು ನಮ್ಮ ದೇಶದ ಸಂವಿಧಾನವನ್ನೇ ತಿರುಚುವ ಕೆಲಸ ನಡೆಯುತ್ತಿದೆ. ಸಂವಿಧಾನವನ್ನು ರಕ್ಷಿಸುವ ಜೊತೆಗೆ ಸಂವಿಧಾನದ ಆಶಯಗಳನ್ನು ಜಾರಿಗೆ ತರಲು ಯುವಜನರ ಪಡೆ ಕಟ್ಟಬೇಕಿದೆ. ಈ ದಿಸೆಯಲ್ಲಿ ಸತೀಶ್ ಜಾರಕಿಹೊಳಿಯವರ ನೇತೃತ್ವದ ಮಾನವ ಬಂಧುತ್ವ ವೇದಿಕೆ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಹೈಕೋರ್ಟ್ ವಕೀಲರಾದ ಅನಂತ ನಾಯಕ, ಸಾಮಾಜಿಕ ಕಾರ್ಯಕರ್ತರಾದ ಎಂ. ಬಿ. ಅಬಿದ್  ಅಲಿ, ರಾಘು ದೊಡ್ಡಮನಿ, ಸಾಹಿತಿ ಹನುಮಂತ ಹಾಲಿಗೇರಿ, ಮಾನವ ಬಂಧುತ್ವ ವೇದಿಕೆ ಸಂಚಾಲಕ ತೋಳಿ ಭರಮಣ್ಣ, ಉಕ್ಕಡಗಾತ್ರಿಯ ಮಂಜು ದೊಡ್ಡಮನಿ, ಸಿದ್ದಪ್ಪ ಮರಿಕುಂಟೆ, ಸಾಬೀರ್ ಜಯಸಿಂಹ, ಜಿಗಳಿಯ ಆನಂದಪ್ಪ, ಪತ್ರಕರ್ತ ಜಿಗಳಿ ಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.  

ಶಿಬಿರದಲ್ಲಿ ಹರ್ಷ ಕುಗ್ವೆ, ಎ. ಬಿ .ರಾಮಚಂದ್ರಪ್ಪ, ಅನಂತ ನಾಯಕ ಅವರು ಉಪನ್ಯಾಸ ನೀಡಿದರು,

error: Content is protected !!