ದಾವಣಗೆರೆ, ಸೆ. 3 – ನಗರದ ರಾಂ ಅಂಡ್ ಕೋ ಸರ್ಕಲ್ನಲ್ಲಿ ರಸ್ತೆಯ ಮೇಲೆ ಫುಟ್ಪಾತ್ ನಿರ್ಮಿ ಸಲಾಗಿದೆ. ಇದರಿಂದ ಸಂಚಾರ ಹಾಗೂ ವಾಹನ ನಿಲುಗಡೆಗೆ ಸಮಸ್ಯೆಯಾಗಿದೆ. ಫುಟ್ಪಾತ್ ಜಾಗ ಕಡಿಮೆ ಮಾಡಲಾಗುವುದು ಎಂದು ಮೇಯರ್ ಬಿ.ಜಿ. ಅಜಯ್ ಕುಮಾರ್ ತಿಳಿಸಿದ್ದಾರೆ.
ರಾಂ ಅಂಡ್ ಕೋ ಸರ್ಕಲ್ಗೆ ಇಂದು ಭೇಟಿ ನೀಡಿ, ಅಲ್ಲಿ ನಡೆಸಲಾಗುತ್ತಿರುವ ಫುಟ್ಪಾತ್ ಕಾಮಗಾರಿ ಹಾಗೂ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಿದ ನಂತರ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದ್ದಾರೆ.
ಸಾರ್ವಜನಿಕರು ಸಾಕಷ್ಟು ದಿನಗಳಿಂದ ಈ ಬಗ್ಗೆ ದೂರು ನೀಡುತ್ತಿದ್ದರು. ಸ್ಮಾರ್ಟ್ ಸಿಟಿ ಕೆಲಸ ಮಾಡುವಾಗ ರಸ್ತೆ ಮೇಲೆ ಫುಟ್ಪಾತ್ ನಿರ್ಮಿಸಿದ್ದು ಕಂಡು ಬರುತ್ತಿದೆ. ಈ ಬಗ್ಗೆ ಪರಿಶೀಲಿಸಿ, ಆ ರೀತಿ ಆಗಿದ್ದರೆ ತೆರವು ಮಾಡಿ ರಸ್ತೆ ವಿಸ್ತರಿಸಲಾಗುವುದು ಎಂದರು.
ಸರ್ಕಲ್ನಲ್ಲಿಯೇ ಮೊದಲಿನಂತೆ ವಾಹನಗಳ ನಿಲುಗಡೆ ಮಾಡಲು ಅವಕಾಶ ನೀಡಲು ನಿರ್ಧರಿಸಲಾಗಿದೆ. ಇದರಿಂದ ಸಂಚಾರ ಹಾಗೂ ವಾಹನ ನಿಲುಗಡೆ ಒತ್ತಡ ಕಡಿಮೆಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹಾಗೂ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮತ್ತಿತರರು ಉಪಸ್ಥಿತರಿದ್ದರು.
ರಸ್ತೆ ಮೇಲೆ ಫುಟ್ಪಾತ್ ನಿರ್ಮಿಸಿಲ್ಲ : ಮಲ್ಲಾಪುರ
ರಾಂ ಅಂಡ್ ಕೋ ಸರ್ಕಲ್ನಲ್ಲಿ ರಸ್ತೆ ಮೇಲೆ ಫುಟ್ಪಾತ್ ನಿರ್ಮಾಣ ಮಾಡಿಲ್ಲ. ಸಂಚಾರದ ವಿಷಯದಲ್ಲಿ ನಮಗೆ ಪೊಲೀಸರು ಸಂಬಂಧಪಟ್ಟ ಇಲಾಖೆ ಮಾರ್ಗದರ್ಶನದಂತೆ ನಾವು ಫುಟ್ಪಾತ್ ನಿರ್ಮಾಣ ಮಾಡಿದ್ದೇವೆ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ `ಜನತಾವಾಣಿ’ಗೆ ತಿಳಿಸಿದ್ದಾರೆ.
ಪೊಲೀಸ್ ಇಲಾಖೆ ಸಲಹೆಯಂತೆ ನಾವು ಫುಟ್ಪಾತ್ ಹಾಗೂ ಪಾರ್ಕಿಂಗ್ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇವುಗಳ ನಿರ್ವಹಣೆ ಅವರದೇ ಆಗಿರುವುದರಿಂದ ಅವರ ಸಲಹೆಯಂತೆ ಕಾಮಗಾರಿ ನಡೆಸ ಲಾಗುತ್ತಿದೆ ಎಂದವರು ತಿಳಿಸಿದ್ದಾರೆ.
ರಾಜ ಕಾಲುವೆ ಮೇಲೆ ಪಾನಿಪುರಿ : ನಗರದ 42 ವರ್ಷಗಳಷ್ಟು ಹಳೆಯದಾದ ಪಾನಿಪುರಿ ಅಂಗಡಿಯೊಂದು ರಾಂ ಅಂಡ್ ಕೋ ಸರ್ಕಲ್ನ ರಾಜಕಾಲುವೆ ಮೇಲೆ ಇದ್ದುದನ್ನು ನೋಡಿ ಎಸ್ಪಿ ಹನುಮಂತರಾಯ ಆಶ್ಚರ್ಯ ವ್ಯಕ್ತಪಡಿಸಿದರು. ಪಾನಿಪುರಿ ಅಂಗಡಿ ಹಿಂದೆ ಚರಂಡಿಯಲ್ಲಿ ಕಸದ ರಾಶಿಯೇ ಸೇರಿಕೊಂಡಿದೆ. ಇಂತಹ ಮಲಿನ ವಾತಾವರಣದಲ್ಲಿ ಪ್ರತಿದಿನ ನೂರಾರು ಜನ ತಿಂಡಿ ತಿನ್ನುತ್ತಿದ್ದಾರೆ. ಇದನ್ನು ತಕ್ಷಣ ತೆರವು ಗೊಳಿಸಬೇಕು ಎಂದವರು ಹೇಳಿದರು.
ಸರ್ಕಲ್ನಲ್ಲಿ ಫುಟ್ಪಾತ್ ಅತಿಕ್ರಮಿಸಿ ಕೊಂಡು ತಿಂಡಿ ಮಾಡುತ್ತಿದ್ದ ಅಂಗಡಿಯ ವರಿಗೆ ಅವರು ಎಚ್ಚರಿಕೆ ನೀಡಿ, ಹಿಂದೆ ಸರಿಯುವಂತೆ ತಿಳಿಸಿದರು.