ಮಲೇಬೆನ್ನೂರು, ನ.18- ಮಳೆಯಿಂದಾಗಿ ಬೆಳೆ ಹಾನಿ ಆಗಿರುವ ಬಗ್ಗೆ ಕೂಡಲೇ ವರದಿ ತರಿಸಿಕೊಂಡು ರೈತರಿಗೆ ಪರಿಹಾರ ನೀಡುವಂತೆ ಶಾಸಕ ಎಸ್. ರಾಮಪ್ಪ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಗುರುವಾರ ಬನ್ನಿಕೋಡು, ಕೆ. ಬೇವಿನಹಳ್ಳಿ, ಕಡ್ಲೆಗೊಂದಿ, ದೇವರಬೆಳಕೆರೆ, ಕುಂಬಳೂರು, ಜಿಗಳಿ, ಹಾಲಿವಾಣ, ಹರಳಹಳ್ಳಿ ಮತ್ತು ಲಕ್ಕಶೆಟ್ಟಿಹಳ್ಳಿಗೆ ಭೇಟಿ ನೀಡಿ, ಭತ್ತದ ಬೆಳೆ ನೆಲಕಚ್ಚಿರುವುದನ್ನು ವೀಕ್ಷಿಸಿದ ನಂತರ `ಜನತಾವಾಣಿ’ಯೊಂದಿಗೆ ಅವರು ಮಾತನಾಡಿದರು.
ಕಟಾವಿಗೆ ಬಂದಿರುವ ಭತ್ತದ ಗದ್ದೆಗಳಲ್ಲಿ ನಿಂತಿರುವ ನೀರಿನಲ್ಲಿ ಭತ್ತದ ಗೊನೆ ಮುಳಗಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.ಇದರಿಂ ದಾಗಿ ರೈತರಿಗೆ ಬಹಳ ನಷ್ಟವಾಗಿದ್ದು, ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ನೀಡಬೇ ಕೆಂದು ಶಾಸಕ ರಾಮಪ್ಪ ಒತ್ತಾಯಿಸಿದರು.
ಎಲ್ಲಾ ಹಳ್ಳಿಗಳಲ್ಲಿ ರೈತರು ತಮ್ಮ ಸಂಕಷ್ಟ ಹೇಳಿಕೊಂಡಾಗ ಶಾಸಕರು ಸಮಾಧಾನದಿಂದ ಕೇಳಿ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಜಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ, ಸಮಾಜ ಸೇವಕ ನಂದಿಗಾವಿ ಶ್ರೀನಿವಾಸ್, ಗ್ರಾಮದ ಮುಖಂಡರಾದ ಜಿ. ಆನಂದಪ್ಪ, ಬಿ.ಎಂ. ದೇವೇಂದ್ರಪ್ಪ, ಬಿಳಸನೂರು ಚಂದ್ರಪ್ಪ, ಡಿ.ಎಂ. ಹರೀಶ್, ಬಿ. ಸೋಮಶೇಖರಚಾರಿ, ಶಿವಾನಂದಪ್ಪ, ಮಲೇಬೆನ್ನೂರಿನ ಕೆ.ಪಿ. ಗಂಗಾಧರ್, ದೇವರಬೆಳಕೆರೆ ಮಹೇಶ್ವರಪ್ಪ ಹಾಜರಿದ್ದರು.