ಹರಪನಹಳ್ಳಿ ಕ್ಷೇತ್ರದ ಕಾರ್ಯಕ್ರಮದಲ್ಲಿ ಜಗಳೂರು ಶಾಸಕ ಎಸ್.ವಿ.ರಾಮಚಂದ್ರ
ಹರಪನಹಳ್ಳಿ, ಆ.17- ಜಗಳೂರು ವಿಧಾನಸಭಾ ಕ್ಷೇತ್ರದ ಅರಸಿಕೆರೆಯ ಏಳು ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಸಿ.ಸಿ. ರಸ್ತೆ, ಸಮುದಾಯ ಭವನ ಸೇರಿ ದಂತೆ ಸಮಗ್ರ ಅಭಿವೃದ್ಧಿಗಾಗಿ 4.5 ಕೋಟಿ ರೂ. ವೆಚ್ಚ ದಲ್ಲಿ ವಿವಿಧ ಪ್ರಗತಿಪರ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಗಳೂರು ಶಾಸಕ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರ ಹೇಳಿದರು.
ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ 60.44 ಲಕ್ಷ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ, 14 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಕೇಂದ್ರ, 20 ಲಕ್ಷ ರೂ. ವೆಚ್ಚದಲ್ಲಿ ವಸತಿ ಗೃಹಗಳ ಭೂಮಿ ಪೂಜೆ, ಪುಣಭಗಟ್ಟಿ ಗ್ರಾಮದಿಂದ ಚನ್ನಾಪುರದವರೆಗೆ 55 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಅರಸೀಕೆರೆಯಲ್ಲಿ 1.10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಬಸ್ ನಿಲ್ದಾಣದ ಭೂಮಿ ಪೂಜೆ ನೆರವೇರಿ ಸಿದ ಬಳಿಕ ಮಾತನಾಡಿದ ಅವರು, ಕೊರೊನಾ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಬಿಜೆಪಿ ಸರ್ಕಾರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ, ಜನಪರ ಕಾಳಜಿ ಮೆರೆದಿದೆ ಎಂದರು.
ಐತಿಹಾಸಿಕ ಉಚ್ಚಂಗಿದುರ್ಗವನ್ನು ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಿಸಲು ಹಾಲಮ್ಮನ ತೋಪಿನಲ್ಲಿ ಸಮದಾಯ ಭವನ ಮತ್ತು ಅರಸಿಕೆರೆ ಗ್ರಾಮವನ್ನು ಸ್ವಚ್ಛ ಹಾಗೂ ಸುಂದರ ಗ್ರಾಮವನ್ನಾಗಿ ಮಾಡುತ್ತೇನೆ ಎಂದು ತಿಳಿಸಿದ ಅವರು, ನಾಡ ಕಛೇರಿ ಸೇರಿದಂತೆ ಹೋಬಳಿ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಕಛೇರಿಗಳಿಗೆ ಸೂಕ್ತ ಸ್ಥಳ ಗುರುತಿಸಿ ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಕೋವಿಡ್ನಿಂದಾಗಿ ಸಂಕಷ್ಟದಲ್ಲಿರುವ ಕಾರ್ಮಿಕ ಮತ್ತು ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸಾಮಾಜಿಕ ಭದ್ರತೆಯ ಅಡಿಯಲ್ಲಿ 80 ಸಾವಿರ ಕಿಟ್ಗಳು ಬಂದಿದ್ದು, ಉಚ್ಚಂಗಿದುರ್ಗ ಮತ್ತು ಅರಸಿಕೆರೆ ಗ್ರಾಮಗಳಲ್ಲಿ ಈಗಾಗಲೇ 4,000 ಸಾವಿರ ಕಿಟ್ ವಿತರಿಸಲಾಗಿದ್ದು, ಉಳಿದ ಎಲ್ಲಾ ಕಾರ್ಮಿಕರಿಗೆ ಹಂತ ಹಂತವಾಗಿ ವಿತರಿಸುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, ಶೀಘ್ರದಲ್ಲೇ ಜಲಸಂಪನ್ಮೂಲ ಸಚಿವರನ್ನೊಳಗೊಂಡಂತೆ ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ಹರಪನಹಳ್ಳಿ ಶಾಸಕ ಜಿ. ಕರುಣಾಕರ ರೆಡ್ಡಿ ಸಮ್ಮುಖದಲ್ಲಿ ಉದ್ಘಾಟನೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಡಿ. ಸಿದ್ದಪ್ಪ, ತಾ.ಪಂ. ಸದಸ್ಯ ಬೇವಿನಹಳ್ಳಿ ಕೆಂಚನಗೌಡ, ಗ್ರಾ.ಪಂ. ಅಧ್ಯಕ್ಷ ಡಿ.ಅಕ್ಕಮ್ಮ, ಸದಸ್ಯೆ ವಿಶಾಲಾಕ್ಷಮ್ಮ, ಮುಖಂಡರಾದ ಚಟ್ನಿಹಳ್ಳಿ ರಾಜಣ್ಣ, ವಕೀಲ ವಿಶ್ವನಾಥಯ್ಯ, ಮಂಜುನಾಥ್, ನಿಂಗಪ್ಪ, ಕೆ. ಮಂಜಪ್ಪ, ಬಾಲೇನಹಳ್ಳಿ ಜಿ. ಕೆಂಚನಗೌಡ, ಫಣಿಯಾಪುರ ಲಿಂಗರಾಜ್, ಮೆಹಬೂಬ್ ಸಾಬ್, ಸತ್ತಾರ್ ಸಾಬ್, ದುರ್ಗೇಶ್ ಪೂಜಾರ್, ಅಣಜಿಗೆರೆ ನಾಗ ರಾಜ್, ಡಿ. ಲಕ್ಷ್ಮಣ, ಉಪ ತಹಶೀಲ್ದಾರ್ ಫಾತಿಮಾ, ಕಾರ್ಮಿಕ ಇಲಾಖೆ ಅಧಿಕಾರಿ ಇಬ್ರಾಹಿಂ, ಕಾರ್ಮಿಕ ಮುಖಂಡ ಗುಡಿಹಳ್ಳಿ ಹಾಲೇಶ್, ಅರಸೀಕೆರೆ ಪಿಡಿಒ ಅಂಜಿನಪ್ಪ, ಉಚ್ಚಂಗಿದುರ್ಗ ಪಿಡಿಒ ಉಮೇಶ್ ಇನ್ನಿತರರಿದ್ದರು.