ಮಳೆಯಿಂದಾಗಿ ಮತ್ತೆ ಭರ್ತಿಯಾದ ಭದ್ರಾ

ಮುಂಗಾರು ನಂತರ ಡ್ಯಾಂ ತುಂಬಿರುವುದು ಇದೇ ಮೊದಲು

ಶಿವಮೊಗ್ಗ, ನ.18- ಭದ್ರಾ ಜಲಾಶಯವು ಇದೇ ಮೊದಲ ಬಾರಿಗೆ ಮುಂಗಾರು ಹಂಗಾಮಿನ ನಂತರವೂ ಗರಿಷ್ಟ ಮಟ್ಟದಲ್ಲಿ ನೀರು ಸಂಗ್ರಹ ಆಗುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.

ಪ್ರತಿ ವರ್ಷ ಮುಂಗಾರು ಹಂಗಾಮಿಗೆ ಭದ್ರಾ ಜಲಾಶಯದಿಂದ ಕಾಲುವೆ ಮೂಲಕ ಕುಡಿಯುವ ನೀರಿಗಾಗಿ 2.0582 ಟಿಎಂಸಿ, ನದಿ ಮೂಲಕ ಕುಡಿಯುವ ನೀರಿಗಾಗಿ 3.3874 ಟಿಎಂಸಿ, ನದಿ ಮೂಲಕ ಕೈಗಾರಿಕೆ ಗಳಿಗಾಗಿ 1.6028 ಟಿಎಂಸಿ, ಜೂನ್‌ನಿಂದ ಡಿಸೆಂಬರ್‌ವರೆಗೆ ಆವಿಯಾಗುವ ನೀರಿನ ಪ್ರಮಾಣ 1.50 ಟಿಎಂಸಿ, ಭದ್ರಾ ಮೇಲ್ದಂಡೆ ಕಾಲುವೆಗೆ 6.11 ಟಿಎಂಸಿ ಮತ್ತು ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ 38 ಟಿಎಂಸಿ ನೀರು ಸೇರಿ ಒಟ್ಟು 49.13 ಟಿಎಂಸಿ ನೀರಿನ ಅವಶ್ಯಕತೆ ಇರುತ್ತದೆ. ಈ ಬಾರಿ ವಿಶೇಷ ಅಂದರೆ ಭದ್ರಾ ಜಲಾಶಯದಿಂದ ಮುಂಗಾರು ಹಂಗಾಮಿಗೆ ನೀರು ಹರಿಸುವ ಬಗ್ಗೆ ಚರ್ಚಿಸಲು ಭದ್ರಾ ಕಾಡಾ ಸಭೆ ಕರೆದಾಗ ಜಲಾಶಯದಲ್ಲಿ (ದಿನಾಂಕ 14.07.2021ಕ್ಕೆ) 157 ಅಡಿ ನೀರಿತ್ತು.

ನೀರು ಸಂಗ್ರಹ  ಪ್ರಮಾಣ 40.484 ಟಿಎಂಸಿ ಮಾತ್ರ ಇತ್ತು. ಡೆಡ್ ಸ್ಟೊರೇಜ್ 8.50 ಟಿಎಂಸಿ ಹಾಗೂ ಎಂ.ಡಿ.ಡಿ.ಎಲ್ 13.832 ಟಿಎಂಸಿ ಹೊರೆತುಪಡಿಸಿ, ಬಳಕೆಗೆ ಬರುವ ನೀರಿನ ಪ್ರಮಾಣ 26.652 ಟಿಎಂಸಿ ಆಗಿತ್ತು.

ಮುಂಗಾರು ಹಂಗಾಮಿಗೆ ಅವಶ್ಯವಿರುವ 49.13 ಟಿಎಂಸಿ ನೀರಿನಲ್ಲಿ 22.478 ಟಿಎಂಸಿ ನೀರಿನ ಕೊರತೆ ಇತ್ತು.

ನೀರಿನ ಕೊರತೆ ನಡುವೆಯೂ ಮುಂಗಾರು ಹಂಗಾಮಿಗೆ ಸತತವಾಗಿ 120 ದಿನ ನೀರು ಹರಿಸಲು ಭದ್ರಾ ಕಾಡಾ ಅಧ್ಯಕ್ಷರಾದ ಶ್ರೀಮತಿ ಪವಿತ್ರ ರಾಮಯ್ಯ ನೇತೃತ್ವದ ಕಾಡಾ ಸಭೆ ನಿರ್ಧಾರ ಕೈಗೊಂಡಿತ್ತು. ಮಳೆದೇವನ ಕೃಪೆಯಿಂದ ಎಲ್ಲರ ನಿರೀಕ್ಷೆಯಂತೆ ಜುಲೈ 31ಕ್ಕೆ ಜಲಾಶಯ ಭರ್ತಿಯಾಗುವ ಹಂತ ತಲುಪಿತ್ತು.

ಅಲ್ಲಿಂದ ಇಲ್ಲಿಯವರೆಗೂ ಜಲಾಶಯದಿಂದ ಬಲ ಮತ್ತು ಎಡದಂಡೆ ಕಾಲುವೆಗಳಿಗೆ ಸತತವಾಗಿ ನೀರು ಹರಿದಿದೆ. ಭದ್ರಾ ಮೇಲ್ದಂಡೆ ಕಾಲುವೆಗೂ ನೀರು ಹರಿಸಲಾಗಿದೆ.

ಆದರೂ ನಿರಂತರ ಒಳ ಹರಿವಿನಿಂದಾಗಿ ಜಲಾಶಯದಲ್ಲಿ ಗುರುವಾರದ ವರದಿ ಪ್ರಕಾರ ನೀರಿನ ಮಟ್ಟ 186 ಅಡಿಗಳಾಗಿರುತ್ತದೆ. ಗುರುವಾರ ಜಲಾಶಯಕ್ಕೆ 7609 ಕ್ಯೂಸೆಕ್ಸ್ ಒಳ ಹರಿವು ಇದ್ದು, ನದಿಗೆ 5 ಸಾವಿರ ಕ್ಯೂಸೆಕ್ಸ್ ನೀರನ್ನು ಬೀಡಲಾಗಿದೆ. ಎಡ ಮತ್ತು ಬಲ ದಂಡೆ ನಾಲೆಗಳಿಗೆ ನೀರನ್ನು ಬಂದ್ ಮಾಡಲಾಗಿದೆ.

ಕಳೆದ ವರ್ಷ ಈ ದಿನ ಜಲಾಶಯದಲ್ಲಿ 181 ಅಡಿ ನೀರಿತ್ತು. ಭದ್ರಾ ಅಚ್ಚುಕಟ್ಟಿನ ಬೇಸಿಗೆ ಬೆಳೆಗೆ ನೀರಿನ ಯಾವುದೇ ತೊಂದರೆ ಇಲ್ಲ. ಆದರೆ, ಈಗ ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಭತ್ತದ ಉತ್ತಮ ಬೆಳೆ ನಿರೀಕ್ಷೆ ಮಾಡಿದ್ದ ಅಚ್ಚುಕಟ್ಟಿನ ರೈತರಿಗೆ ತೀವ್ರ ತೊಂದರೆ ಆಗಿದ್ದು, ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಹವಾಮಾನ ಇಲಾಖೆ ಪ್ರಕಾರ ಇನ್ನೂ 2 ದಿನ ಮಳೆ ಬರುವ ಸಾಧ್ಯತೆ ಇದೆ ಎಂಬ ವರದಿ ರೈತರ ನಿದ್ದೆಗೆಡಿಸಿದೆ.

error: Content is protected !!