ರಾಜ್ಯದ ಶೇ. 60ರಷ್ಟು ಪ್ರದೇಶದಲ್ಲಿ ಕುಡಿಯುವ ನೀರಿನಲ್ಲಿ ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಫ್ಲೋರೈಡ್‌

`ಶುದ್ಧ ಜಲ’ ಅಭಿಯಾನ ಕಾರ್ಯಕ್ರಮದಲ್ಲಿ `ಶುದ್ಧ ಗಂಗಾ’ ಮೇಲ್ವಿಚಾರಕ ಫಕ್ಕೀರಪ್ಪ ಬೆಲ್ಲಾಮುದ್ದಿ 

ದಾವಣಗೆರೆ, ನ. 18- ರಾಜ್ಯದಲ್ಲಿ ಶೇಕಡ 60ರಷ್ಟು ಪ್ರದೇಶದಲ್ಲಿ ಕುಡಿಯುವ ನೀರಿನಲ್ಲಿ ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಫ್ಲೋರೈಡ್‌, ಶೇ. 20ರಷ್ಟು ಅತ್ಯಧಿಕ ನೈಟ್ರೇಟ್‌, ಮತ್ತು ಶೇ. 38ರಷ್ಟು ಸೂಕ್ಷ್ಮಾಣುಗಳಿಂದ ಕಲುಷಿತವಾಗಿ ಜನರು ರೋಗ-ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಶುದ್ಧ ನೀರನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ `ಶುದ್ಧ ಗಂಗಾ’ ಮೇಲ್ವಿಚಾರಕ ಫಕ್ಕೀರಪ್ಪ ಬೆಲ್ಲಾಮುದ್ದಿ ತಿಳಿಸಿದರು.

ಕುಂದವಾಡ ಅಜ್ಜಯ್ಯನ ಮಠದ ಆವರಣದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ `ಶುದ್ಧ ಜಲ’ ಅಭಿಯಾನ ಕಾರ್ಯಕ್ರಮದ ಮೂಲಕ ನಡೆದ ರಸ್ತೆ ಜಾಥಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. 

ಡಾ|| ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ಅಮ್ಮನವರು ಸಮುದಾಯದ ಅಭಿವೃದ್ಧಿಯ ಆಶಯವನ್ನಿಟ್ಟುಕೊಂಡು ಹಲವಾರು ಕಾರ್ಯಕ್ರಮಗಳಿಗೆ ಪ್ರೇರೇಪಣೆ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ. ಇಂತಹ ಆಶಯ ದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವೇ ಶುದ್ಧ ಗಂಗಾ ಕಾರ್ಯಕ್ರಮವಾಗಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಈಗಾಗಲೇ ನಾವು 324 ಶುದ್ಧ ನೀರಿನ ಘಟಕಗಳನ್ನು ಪ್ರಾರಂಭ ಮಾಡಿ ಪ್ರತಿ ಲೀಟರ್‌ ಗೆ 15 ಪೈಸೆಯಲ್ಲಿ 81756 ಬಳಕೆದಾರರಿಗೆ ಪ್ರತಿದಿನ ಶುದ್ಧ ನೀರನ್ನು ಪೂರೈಸುತ್ತಿದ್ದೇವೆ ಎಂದು ತಿಳಿಸಿದರು.

ಅಶುದ್ಧ ನೀರು ಸೇವನೆಯಿಂದ ಆರೋಗ್ಯ ಕೆಡುವುದು, ಕರಳು ಬೇನೆ, ವಾಂತಿ, ವಿಷಮ ಶೀತ, ಜ್ವರ, ಕಿಡ್ನಿ ಸ್ಟೋನ್‌, ಕ್ಯಾನ್ಸರ್‌, ಅಧಿಕ ಅವಧಿಯವರೆಗೆ ಅನಾರೋಗ್ಯ, ಪಾರ್ಶ್ವ ವಾಯು, ಹೊಟ್ಟೆನೋವು, ಗ್ಯಾಸ್ಟ್ರಿಕ್‌, ಹೃದ ಯದ ರಕ್ತದ ಒತ್ತಡ ಹೆಚ್ಚಲು ಕಾರಣವಾಗುತ್ತದೆ, ಆದ್ದರಿಂದ ಪ್ರತಿಯೊಬ್ಬರು ಶುದ್ಧ ನೀರನ್ನು ಬಳಸಬೇಕೆಂದು ಯೋಜನೆಯ ಜ್ಞಾನವಿಕಾಸ ಸಮನ್ವಯಾಧಿಕಾರಿ ಗಾಯತ್ರಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಶುದ್ಧಗಂಗಾ ಪ್ರೇರಕರಾದ ಟಿ. ಆರ್. ಮಂಜುಳಾ, ಸೇವಾ ಪ್ರತಿನಿಧಿ ಆಶಾ, ಸ್ವಸಹಾಯ ಸಂಘದ ಆಶಾ ಭಾಗವಹಿಸಿದ್ದರು, ಪುಷ್ಪಾ ನಿರೂಪಿಸಿದರು.

error: Content is protected !!