ಪಂಡಿತಾರಾಧ್ಯ ಶ್ರೀ
ಸಾಣೇಹಳ್ಳಿ, ಮಾ.29- ರಂಗಭೂಮಿ ಜೀವಂತ ಕಲೆ. ಅದು ಸ್ಥಾವರವಲ್ಲ. ಜಂಗಮ. ರಂಗಭೂಮಿಯ ದಿನಾಚರಣೆ ಕೇವಲ ಒಂದು ದಿನಕ್ಕೆ ಮೀಸಲಲ್ಲ. ನಿತ್ಯ ನಿರಂತರವಾಗಬೇಕು ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಇಲ್ಲಿನ ಎಸ್.ಎಸ್. ರಂಗಮಂದಿರದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಸರ್ಕಾರ ಇಂತಹ ಕಲೆಗೆ ಹೆಚ್ಚಿನ ನೆರವು ನೀಡುತ್ತಿಲ್ಲದಿರುವುದು ದುರ್ದೈವದ ಸಂಗತಿ. ಪ್ರಾಥಮಿಕ ಶಿಕ್ಷಣದಲ್ಲಿ ರಂಗಭೂಮಿಯ ಶಿಕ್ಷಕರನ್ನು ನೇಮಕ ಮಾಡಬೇಕು. ಇದರಿಂದ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಜಾಣರಾಗುವ ಮೂಲಕ ಶಿಕ್ಷಣ ಗುಣಮಟ್ಟ ಕಾಪಾಡಿಕೊಳ್ಳಬಹುದು ಎಂದರು.
ಮುಖ್ಯ ಅತಿಥಿಯಾಗಿ ಎ.ಸಿ. ಚಂದ್ರಣ್ಣ ಮಾತನಾಡಿ, ರಂಗಭೂಮಿಯ ಕಲೆಗಳು ಇರುವೆಡೆ ರಕ್ತದ ಕಲೆಗಳು ಇರುವುದಿಲ್ಲ. ವ್ಯಕ್ತಿಯನ್ನು ಸಂಸ್ಕಾರವಂತನ ನ್ನಾಗಿಸುವ ಶಕ್ತಿ ರಂಗಭೂಮಿಗಿದೆ. ಬದ್ಧತೆ ರಂಗಭೂಮಿ ಕಲಿಸಿಕೊಡುವ ಮೊದಲ ಪಾಠ ಎಂದರು.
ಇಂಗ್ಲೆಂಡ್‌ನ ನಟಿ ಹೆಲೆನ್ ಮಿರ್ರೆ ಅವರ ವಿಶ್ವ ರಂಗಭೂಮಿ ದಿನಾಚರಣೆ ಸಂದೇಶವನ್ನು ರಂಗ ಶಿಕ್ಷಕ ಕೆ. ವೆಂಕಟೇಶ್ವರ ಅನುವಾದಿಸಿ, ವಾಚಿಸಿದರು. ವಿವಿಧ ನಾಟಕಗಳ ರಂಗಗೀತೆಗಳನ್ನು ರಂಗಶಾಲೆ ಪ್ರಾಚಾರ್ಯ ಆರ್. ಜಗದೀಶ್, ಸಂಗೀತ ಶಿಕ್ಷಕ ಹೆಚ್.ಎಸ್. ನಾಗರಾಜ್, ಅನುಪ್ರಿಯ, ತಬಲಾ ಸಾಥ್ ಶರಣ್ ಮತ್ತು ರಂಗಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟರು.
ಆತ್ಮಹತ್ಯೆ ಎನ್ನು ವಿಶಿಷ್ಟ ಕೋಲಾಟದ ರೂಪಕವನ್ನು ರಂಗಶಾಲೆ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ವೇದಿಕೆಯಲ್ಲಿ ರಂಗ ಶಿಕ್ಷಕ ಮಲ್ಲೇಶ್, ಕೆ. ವೆಂಕಟೇಶ್ವರ, ವಿನೋದ್ ಭಂಡಾರಿ, ಆರ್. ಜಗದೀಶ್ ಉಪಸ್ಥಿತರಿದ್ದರು.
ಕಲಾಸಂಘದ ಪದಾಧಿಕಾರಿಗಳು, ಶಾಲಾ-ಕಾಲೇಜು ಅಧ್ಯಾಪಕರು, ಗ್ರಾಮಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭೋರೇಗೌಡ ಕಾರ್ಯಕ್ರಮ ನಡೆಸಿಕೊಟ್ಟರು.