ಲಾಕ್‌ ರಹಿತ ಕಠಿಣ ಕ್ರಮ

ಬೆಂಗಳೂರು, ಮಾ. 22 – ಕೊರೊನಾ ನಿಯಮಾವಳಿ ಉಲ್ಲಂಘಿಸಿ ಮದುವೆ ಮತ್ತು ಇತರೆ ಸಮಾರಂಭ ನಡೆಸಿದರೆ, ಅಂತಹವರ ವಿರುದ್ಧ ದಂಡ ವಿಧಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಇಂದು ಕೈಗೊಂಡಿದೆ. 

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 

ಸೂಚಿಸಿದ ಸಂಖ್ಯೆಗಿಂತ ಹೆಚ್ಚು ಜನರು ಮದುವೆ ಅಥವಾ ಇನ್ನಾವುದೇ ಸಮಾರಂಭದಲ್ಲಿ ಪಾಲ್ಗೊಂಡರೆ ಮದುವೆ ನಡೆಸುವ ಹಾಗೂ ಸಮಾರಂಭಕ್ಕೆ ಸ್ಥಳ ಒದಗಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಮುಂದೆ ಯಾವುದೇ ಸಾರ್ವಜನಿಕ ಸಭೆ, ಸಮಾರಂಭ, ಧಾರ್ಮಿಕ ಸಭೆಗಳನ್ನು ನಡೆಸಬೇಕಾದರೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯ. 

ಸೋಂಕು ತಡೆಗಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ. ಈ ನಿಯಮ ಉಲ್ಲಂಘಿಸಿದರೆ ಪೊಲೀಸ್ ಸಹಾಯದಿಂದ ಜನರಿಗೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ 250 ರೂ. ದಂಡ ವಿಧಿಸಲು ಅವಕಾಶ ನೀಡಲಾಗಿದೆ.

ಸದ್ಯಕ್ಕೆ ಶಾಲಾ-ಕಾಲೇಜುಗಳನ್ನು ಮುಚ್ಚುವ ಬಗ್ಗೆ ಕೋವಿಡ್ ತಜ್ಞರು ನೀಡುವ ಶಿಫಾರಸ್ಸನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸದ್ಯದಲ್ಲೇ ಮತ್ತೊಮ್ಮೆ ತಜ್ಞರ ಸಭೆ ಕರೆದು ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಭೆ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. 

ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲದ ಕಾರಣ ಸದ್ಯಕ್ಕೆ ರಾಜ್ಯದಲ್ಲಿ ಲಾಕ್‍ಡೌನ್, ಸೆಮಿ ಲಾಕ್‍ಡೌನ್, ರಾತ್ರಿ ಕರ್ಫ್ಯೂ ಸೇರಿದಂತೆ ಯಾವುದೇ ಕಠಿಣ ನಿಯಮಗಳನ್ನು ವಿಧಿಸುವುದು ಬೇಡ, ಈಗಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಸಾರ್ವಜನಿಕರು ಪಾಲನೆ ಮಾಡುವಂತೆ ಮನವರಿಕೆ ಮಾಡಬೇಕು. ಲಾಕ್‍ಡೌನ್ ಮಾಡಿದರೆ ಎಲ್ಲಾ ಚಟುವಟಿಕೆಗಳಿಗೂ ಕಡಿವಾಣ ಬೀಳಲಿದೆ, ಈ ಪ್ರಸ್ತಾವನೆಯೇ ಬೇಡ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ನಿಲುವು ತಳೆದಿದ್ದಾರೆ. 

ಮಹಾರಾಷ್ಟ್ರ ಮತ್ತು ಕೇರಳದಿಂದ ರಾಜ್ಯಕ್ಕೆ ಪ್ರವೇಶಿಸುವ ಭಾಗಗಳಲ್ಲಿ ಹೆಚ್ಚಿನ ತಪಾಸಣೆ ಕಾರ್ಯ ಕೈಗೊಳ್ಳುವುದು, ಅಲ್ಲಿಂದ ಬರುವವರಿಗೆ ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಇರುವ ಪ್ರಮಾಣ ಪತ್ರ, ತಪಾಸಣೆ, ಪರೀಕ್ಷೆ ಮಾಡಿಸುವುದು ಸೇರಿದಂತೆ ಮತ್ತಿತರೆ ಕ್ರಮಗಳನ್ನು ಕೈಗೊಳ್ಳುವಂತೆ ಹಲವು ನಿಯಮಗಳನ್ನು ಜಾರಿಗೊಳಿಸುವ ತೀರ್ಮಾನವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. 

error: Content is protected !!