ತಳ್ಳುಗಾಡಿಗಳ ಬಲವಂತದ ತೆರವು : ಎಚ್ಚರಿಕೆ

ದಾವಣಗೆರೆ, ಮೇ 20- ನಗರ ಪಾಲಿಕೆಯ ಸೂಚನೆಯನ್ನು ಧಿಕ್ಕರಿಸಿ ನಗರದ ಮಾರುಕಟ್ಟೆಯಲ್ಲಿ ರಸ್ತೆಯಲ್ಲಿ ತಳ್ಳುಗಾಡಿಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುವ ಮೂಲಕ ಜನ ಸಂದಣಿ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಮಾಡುತ್ತಿದ್ದ ತಳ್ಳುಗಾಡಿಗಳನ್ನು ಪಾಲಿಕೆ ಸಿಬ್ಬಂದಿಗಳು ಬಲವಂತ ವಾಗಿ ತೆರವುಗೊಳಿಸಿದರು.

ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿದ್ದರೂ ಸಹ ಇದಾವುದನ್ನೂ ಲೆಕ್ಕಿಸದೇ ಮಾರುಕಟ್ಟೆಗೆ ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದ ಜನರನ್ನು ನಿಯಂತ್ರಿಸಲು ಮತ್ತು ರಸ್ತೆಯಲ್ಲೇ ತಳ್ಳುಗಾಡಿಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ ಇಬ್ಬರಿಗೂ ಪಾಲಿಕೆ ಆಯುಕ್ತ ವಿಶ್ವನಾಥ್ ಎಚ್ಚರಿಕೆ ನೀಡಿದರು. ಅಲ್ಲದೇ, ತಳ್ಳುಗಾಡಿಗಳನ್ನು ನಿಲ್ಲಿಸಿಕೊಂಡು ನಿಯಮ ಉಲ್ಲಂಘಿಸಿ, ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಸ್ಥರನ್ನು ಮಾರುಕಟ್ಟೆಯಿಂದ ಹೊರ ಹಾಕಿದರು.

ಇದಲ್ಲದೇ ಪ್ರತಿದಿನವೂ ಒಂದೊಂದೇ ಕಾರಣ ಇಟ್ಟುಕೊಂಡು ಮಾರುಕಟ್ಟೆಗೆ ಆಗಮಿಸುತ್ತಿದ್ದ ಜನರಿಗೂ ಸಹ ಮನೆಯಿಂದ ಹೊರಬಾರದೇ ಕೊರೊನಾ ಸೋಂಕಿಗೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದರು. ತಳ್ಳುಗಾಡಿಗಳಿಗೆ ಎಲ್ಲೆಂದರಲ್ಲಿ ನಿಂತು ವ್ಯಾಪಾರ ಮಾಡಲು ಅವಕಾಶ ಇಲ್ಲ. ಅವರು ನಗರದ ಎಲ್ಲಾ ವಾರ್ಡುಗಳಿಗೆ ತೆರಳಿ ಮನೆ ಮನೆ ಬಾಗಿಲಿಗೆ ಹೋಗಿ ಅಲ್ಲಿಯೇ ವ್ಯಾಪಾರ ಮಾಡಬೇಕು. ಆದರೆ, ಕೆಲವರು ಈ ನಿಯಮವನ್ನು ಪಾಲಿಸುತ್ತಿಲ್ಲ. ಪಾಲಿಕೆಯಿಂದ ಎಷ್ಟೇ ಸೂಚನೆ ನೀಡಿದ್ದರೂ ಸಹ ಮಾತು ಕೇಳುತ್ತಿಲ್ಲ. ನಿಯಮ ಉಲ್ಲಂಘಿಸಿ ರಸ್ತೆ ಬದಿಯಲ್ಲಿ ನಿಂತು ವ್ಯಾಪಾರ ನಡೆಸುವ ವ್ಯಾಪಾರಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ವಿಶ್ವನಾಥ್ ಎಚ್ಚರಿಕೆ ನೀಡಿದರು.

ಒಂದೆಡೆ ಪಾಲಿಕೆ ಸಿಬ್ಬಂದಿ ತಳ್ಳುಗಾಡಿಗಳನ್ನು ತಮ್ಮ ವಶಕ್ಕೆ ಪಡೆಯುತ್ತಿದ್ದಂತೆ ಎಚ್ಚೆತ್ತ ಕೆಲವರು ಸದ್ದಿಲ್ಲದೇ ತಮ್ಮ ಗಾಡಿಗಳನ್ನು ತೆರವುಗೊಳಿಸಿದರು. ಹೀಗಾಗಿ ವಿನಾಕಾರಣ ಮಾರುಕಟ್ಟೆಗೆ ಕುಂಟು
ನೆಪದಲ್ಲಿ ಬಂದ ನಾಗರಿಕರು ಅನಿವಾರ್ಯವಾಗಿ ತಮ್ಮ ಮನೆಗಳತ್ತ ವಾಪಸ್ಸಾದರು. ತೆರವು ಕಾರ್ಯಾಚರಣೆಯಲ್ಲಿ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು ಇದ್ದರು.

error: Content is protected !!