ಸಚಿವ ಶಂಕರ್
ರಾಣೇಬೆನ್ನೂರು, ಮಾ.14- ಆರ್.ಶಂಕರ್ ಇನ್ನೂ ರಾಣೇಬೆನ್ನೂರಿನಲ್ಲಿ ಇರುವುದಿಲ್ಲ. ಅವರು ಹರಿಹರ ಅಥವಾ ದಾವಣಗೆರೆಯಲ್ಲಿ ನೆಲೆಸುವ ಮೂಲಕ ತಮ್ಮ ರಾಜಕೀಯ ಆರಂಭಿಸಲಿದ್ದಾರೆ. ಅದೂ ಸಹ ನಗರದಲ್ಲಿನ ತಮ್ಮ ಮನೆಯನ್ನು ಮಾರಾಟ ಮಾಡಿದ್ದಾರೆ ಎಂದು ಕೆಲವರು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು ಎಂದು ತೋಟಗಾರಿಕೆ ಹಾಗೂ ರೇಷ್ಮೆ ಖಾತೆ ಸಚಿವ ಆರ್.ಶಂಕರ್ ಹೇಳಿದರು.
ನಗರದ ಶ್ರೀ ಗಂಗಾ ವಿವಿಧೋದ್ದೇಶ ಸಹಕಾರ ಸಂಘದ ಸಭಾಭವನದಲ್ಲಿ ರಾಣೇಬೆನ್ನೂರಿನ ವಿವಿಧ ಸಂಘ-ಸಂಸ್ಥೆಗಳಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನಗೆ ಆನೆಯ ಮೂರ್ತಿಯ ಉಡುಗೊರೆ ನೀಡಿ ನನ್ನ ವಿರುದ್ಧ ಮಾಡಿರುವ ಪಿತೂರಿ ಮಾತು ಗಳಿಗೆ ನಗರದ ವಿವಿಧ ಸಂಘ-ಸಂಸ್ಥೆಗಳ ಪದಾಧಿ ಕಾರಿಗಳು ತಕ್ಕ ಉತ್ತರ ನೀಡಿದ್ದೀರಿ ಎಂದರು.
ಆನೆ ದಾರಿಯಲ್ಲಿ ಸಾಗುವಾಗ ಶ್ವಾನಗಳು ಬೊಗಳುತ್ತಿರುತ್ತವೆ. ಆಗ ಬೊಗಳುತ್ತಿರುವ ನಾಯಿಗಳನ್ನು ಆನೆ ಎಂದೂ ಹಿಂದಿರುಗಿ ನೋಡದೇ ತನ್ನ ಗಂಭೀರವಾದ ಹೆಜ್ಜೆಗಳನ್ನು ಹಾಕುತ್ತಿರುತ್ತದೆ. ಹಾಗೇಯೇ ಈ ನಿಮ್ಮ ಶಂಕರನ ಹೆಜ್ಜೆಯಾಗಿದೆ. ತಾಲ್ಲೂಕಿನ ಜನರು ಯಾರ ಮಾತಿಗೂ ಕಿವಿಗೊಡಬೇಡಿ. ನನ್ನ ಕೊನೆಯುಸಿರು ಇರುವವರೆಗೆ ರಾಣೇಬೆನ್ನೂರ ಬಿಟ್ಟು ಹೋಗದೇ ನಿಮ್ಮ ಸೇವೆ ಮಾಡುತ್ತೇನೆ ಎಂದು ಶಂಕರ್ ಭರವಸೆ ನೀಡಿದರು.
ಶ್ರೀ ಚನ್ನೇಶ ಸಹಕಾರಿ ಸಂಘದ ಅಧ್ಯಕ್ಷ ಕೆ.ಶಿವಲಿಂಗಪ್ಪ, ತುಂಗಭದ್ರಾ ನೂಲಿನ ಗಿರಣಿ ಅಧ್ಯಕ್ಷ ಕರಬಸಪ್ಪ ಮಾಕನೂರ, ಶ್ರೀ ಗಂಗಾ ವಿವಿಧೋದ್ಧೇಶಗಳ ಸಹಕಾರಿ ಸಂಘದ ಅಧ್ಯಕ್ಷ ರತ್ನಾಕರ ಕುಂದಾಪುರ, ಡಾ. ನಾಗರಾಜ ದೊಡ್ಮನಿ ಮಾತನಾಡಿದರು.
ಶಶಿಕಲಾ ಕುಂದಾಪುರ, ಧನಲಕ್ಷ್ಮಿ ಶಂಕರ್, ಸಾಧಿಕ್ ಪಾಟೀಲ, ಕೃಷ್ಣಮೂರ್ತಿ ಸುಣಗಾರ, ವೀರಣ್ಣ ಬಾರ್ಕಿ, ನಾಗರಾಜ್ ದೀಕ್ಷಿತ್, ಹೆಚ್.ಡಿ.ಬಡಕರಿಯಪ್ಪನವರ, ನಿತ್ಯಾನಂದ ಕುಂದಾಪುರ, ಲಕ್ಷ್ಮಣ ದಾಸರ, ಸಿದ್ದಪ್ಪ ಅಂಬಲಿ, ಹನುಮಂತಪ್ಪ ಕಬ್ಬಾರ, ರಾಜು ಅಡಿವೆಪ್ಪನವರ, ಜಗದೀಶ ಎಲಿಗಾರ, ವಾಸುದೇವ ಲದ್ವಾ, ಕೊಟ್ರೇಶಪ್ಪ ಎಮ್ಮಿ, ಅನ್ನಪೂರ್ಣ ಬಾರ್ಕಿ, ಆಂಜನೇಯ ಬಾಳಿಕಾಯಿ, ಶ್ರೀನಿವಾಸ ಗುಪ್ತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.