ಕ್ರೀಡೆ ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿ : ಶಾಸಕ ರಾಮಚಂದ್ರ

ಜಗಳೂರು, ಮಾ.14- ಯುವಜನತೆಗೆ ದಿನ‌ನಿತ್ಯದ ಬದುಕಿನಲ್ಲಿ ಕ್ರೀಡೆ  ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು  

ಅವರು ಪಟ್ಟಣದ ಕ್ರೀಡಾಂಗಣದಲ್ಲಿ ಸೇವಾ ಲಾಲ್ ಕ್ರಿಕೆಟರ್ ವತಿಯಿಂದ ಎಸ್.ವಿ.ಆರ್ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಮೆಂಟ್‌ನ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾನೂ ಸಹ ಕ್ರೀಡೆಯಿಂದ ರಾಜಕೀಯ ಕ್ಷೇತ್ರಕ್ಕೆ ಬಂದವನು. ನನ್ನ ಅಧಿಕಾರ ಅವಧಿಯಲ್ಲಿ ರಾಜ್ಯ, ರಾಷ್ಟ್ರಮಟ್ಟದ ಹೊನಲು ಬೆಳಕಿನ ಕಬಡ್ಡಿ ಹಾಗು ಪೈಕಾ ಕ್ರೀಡಾಕೂಟವನ್ನು ಆಯೋಜಿಸಿ, ಜಗಳೂರು ಕ್ಷೇತ್ರವನ್ನು ರಾಜ್ಯಕ್ಕೆ ಪರಿಚಯಿಸಿದ ತೃಪ್ತಿ ಇದೆ ಎಂದರು.

ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಭೆಗಳು ಇವೆ. ಅವುಗಳನ್ನು ಬೆಳಕಿಗೆ ತರುವ ಹೊಣೆಗಾರಿಕೆ ನಮ್ಮ ಮೇಲಿದೆ. ಅಂತವರು ಮುಂದೆ ಬಂದರೆ, ಸದಾ ಪ್ರೋತ್ಸಾಹಿಸುತ್ತೇನೆ. ಯುವಕರು ಕ್ರೀಡೆಯ ಜೊತೆಗೆ ಸಮಾಜ ಸೇವೆಗೆ ಮುಂದೆ ಬರಬೇಕು. ಮುಂಬರುವ ದಿನಗಳಲ್ಲಿ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತೇನೆ ಎಂದರು. ಸಮಾಜ ಸೇವಕ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮಾತನಾಡಿ, ಜಾತಿ ಭೇದಗಳನ್ನು ತೊಡೆದು ಹಾಕಿ, ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಕ್ರೀಡೆಯ ಪಾತ್ರ ಮುಖ್ಯವಾಗಿರುತ್ತದೆ. ಸೋಲು – ಗೆಲುವು ಎನ್ನದೇ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದರು.

ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷದಲ್ಲಿ ಗ್ರಾಮೀಣ ಭಾಗಗಳಲ್ಲಿ ಕ್ರೀಡೆಗೆ ಒತ್ತು ಕೊಟ್ಟಿರುವುದು ಸಂತಸ ಮೂಡಿಸಿದೆ. ಆಧುನಿಕ ಮಾಧ್ಯಮಗಳಿಗೆ ಮಾರು ಹೋಗಿ ಮಾನಸಿಕ ಖಿನ್ನತೆಗೆ ಒಳಗಾಗುವ ಬದಲು ದೇಹಕ್ಕೆ ಕೆಲಸ ನೀಡುವ ಮೂಲಕ ದೈಹಿಕ ಶ್ರಮದೊಂದಿಗೆ ಸದೃಢ ದೇಹ ನಿಮ್ಮದಾಗಿಸಿಕೊಳ್ಳಿ ಎಂದು ಸಲಹೆ ನೀಡಿದರು‌.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಎಸ್.ಕೆ.ಮಂಜಣ್ಣ, ಪ.ಪಂ ಅಧ್ಯಕ್ಷ ಆರ್.ತಿಪ್ಪೇಸ್ವಾಮಿ, ಸದಸ್ಯ ನವೀನ್ ಕುಮಾರ್, ಮುಖಂಡರಾದ ಬಿಸ್ತುವಳ್ಳಿ ಬಾಬು, ಬಿದರಿಕೆರೆ ರವಿ, ಓಬಣ್ಣ, ಕೊಟ್ರೇಶ್ ನಾಯ್ಕ, ಚಟ್ನಳ್ಳಿ ರಾಜಣ್ಣ ಸೇರಿದಂತೆ ಮತ್ತಿತರರಿದ್ದರು. ಪ್ರಥಮ ಬಹುಮಾನ ತೋರಣಗಟ್ಟೆ ತಂಡ, ದ್ವೀತಿಯ ಬಹುಮಾನ ಬೆಸ್ಕಾಂ ತಂಡ ಪಡೆದು ಕೊಂಡಿದೆ.

error: Content is protected !!