ಜಗಳೂರು: ಬೇಡಿಕೆಗಳ ಈಡೇರಿಕೆಗಳಿಗಾಗಿ ಆಗ್ರಹಿಸಿ ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆ

ಜಗಳೂರು, ಮಾ.10- ವಿವಿಧ ಬೇಡಿಕೆಗಳ ಈಡೇರಿಕೆಗಳಿಗಾಗಿ‌‌ ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ಕಟ್ಟಡ ಮತ್ತು ಕಲ್ಲು ಕ್ವಾರಿ ಕಾರ್ಮಿಕರು ಪ್ರತಿಭಟನೆ‌ ನಡೆಸಿ ತಹಶೀಲ್ದಾರ್  ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಮಾಹಾತ್ಮಗಾಂಧಿ ವೃತ್ತ , ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ತಾಲ್ಲೂಕು ಕಛೇರಿ ಮುಂಭಾಗಕ್ಕೆ ಆಗಮಿಸಿದರು.

ಎಐಟಿಯುಸಿ ಜಿಲ್ಲಾಧ್ಯಕ್ಷ ಲಕ್ಷ್ಮಣ ಮಾತನಾಡಿ, ಕಾಮನ್ ಸರ್ವೀಸ್ ಸೆಂಟರ್‌ಗಳಲ್ಲಿ ಕಾರ್ಮಿಕರ ಗುರುತಿನ ಚೀಟಿ ನವೀಕರಣ ಮಾಡುವಾಗ ಸಾಕಷ್ಟು ಲೋಪ ದೋಷಗಳಿಂದ ಕಾರ್ಮಿಕರ ಸೌಲಭ್ಯಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಸಿಎಸ್‌ಸಿ  ಸ್ಥಗಿತಗೊಳಿಸಿ ಸೇವಾ ಸಿಂಧು ಐಡಿ ತೆರೆಯಬೇಕು. ನಕಲಿ ಕಟ್ಟಡ ಮಾಲೀಕರನ್ನು ಸೃಷ್ಠಿಸಿ ಲಕ್ಷಾಂತರ ಜನರು ಕಾರ್ಮಿಕರ ಗುರುತಿನ ಚೀಟಿ ನೋಂದಾಯಿಸಿದ್ದು ಕೂಡಲೇ ತನಿಖೆಯಾಗಬೇಕು. ಹಣದ ಆಸೆಗಾಗಿ ಗ್ರಾಮ ಪಂಚಾಯಿತಿ ಸದಸ್ಯರು, ಕೃಷಿ ಕಾರ್ಮಿಕರು, ಗೃಹಿಣಿಯರಿಗೆ ಕಾರ್ಮಿಕರ ಕಾರ್ಡ್ ವಿತರಿಸಲಾಗಿದೆ. ಇದರಿಂದ ಸಾಕಷ್ಟು ನೈಜ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದರು.

ತಾಲ್ಲೂಕು ಗೌರವಾಧ್ಯಕ್ಷ ಮಹಮ್ಮದ್ ಭಾಷ ಮಾತನಾಡಿ, ರಾಜ್ಯಾದ್ಯಂತ  10 ಲಕ್ಷದ 152 ಕಾರ್ಮಿಕರಿಗೆ ಕೋವಿಡ್ -19 ಪರಿಹಾರ ಮಂಜೂರಾಗಿಲ್ಲ . ಅಲ್ಲದೆ ತಾಲ್ಲೂಕಿನಲ್ಲಿ  ಸಾವಿರ ಫಲಾನುಭವಿಗಳಿಗೆ  ಪರಿಹಾರ ಮತ್ತು ನೈಜ ಕಾರ್ಮಿಕರಿಗೆ ಬಾಕಿ ನಿಂತಿರುವ ಸಹಾಯ ಧನದ ಮೊತ್ತ ಕೂಡಲೇ ಬಿಡುಗಡೆಗೊಳಿಸಬೇಕು ಎಂದರು. ಮಹಿಳೆಯರಿಗೆ ಪುರುಷ ಕಾರ್ಮಿಕರಿಗೆ  ಭೇದ ಭಾವವಿಲ್ಲದೆ ಸಮನಾಗಿ ತಲಾ 50  ಸಾವಿರ ರೂ. ಸಹಾಯಧನ ಹಾಗೂ ಮಹಿಳೆಯರಿಗೆ ಹೆರಿಗೆ ಭತ್ಯೆ, ಕನಿಷ್ಠ 6 ತಿಂಗಳು ಬಾಣಂತಿ ಹಾರೈಕೆಗೆ ಮಾಸಿಕ 10 ಸಾವಿರ ರೂ. ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ‌ ಕಾರ್ಯಾಧ್ಯಕ್ಷ ಪಿ.ಕೆ. ಲಿಂಗರಾಜ್, ತಾಲ್ಲೂಕು ಅಧ್ಯಕ್ಷ ವೀರಣ್ಣ, ಉಪಾಧ್ಯಕ್ಷ ರೇಣುಕಾರಾಧ್ಯ, ಕಾರ್ಯದರ್ಶಿಗಳಾದ ತಿಪ್ಪೇಸ್ವಾಮಿ,  ವಿ. ಮಂಜುನಾಥ್,  ಎಐಎಸ್‌ಎಫ್ ರಾಜ್ಯ ಸಹಕಾರ್ಯದರ್ಶಿ ರಮೇಶ್ ನಾಯ್ಕ, ಸಹಕಾರ್ಯದರ್ಶಿ ಮಾದಿಹಳ್ಳಿ ಕೆ. ಮಂಜಪ್ಪ , ತಾಲ್ಲೂಕು ಮುಖಂಡರಾದ ದೇವಿಕೆರೆ  ಮಧು, ಎಚ್.ಎಂ. ಯುವರಾಜ್, ಎಚ್.ಎಂ. ಹೊಳೆ, ತಿಪ್ಪೇಸ್ವಾಮಿ, ಕಾನನಕಟ್ಟೆ ರಶ್ಮಿ ಹಾಗೂ ಕರಿಬಸಪ್ಪ, ವಕೀಲ ಆರ್ ಓಬಳೇಶ್ ಹಾಗು ಇನ್ನಿತರೆ ಕಾರ್ಮಿಕರು ಹಾಜರಿದ್ದರು.

error: Content is protected !!