ಹರಪನಹಳ್ಳಿ : ರಾಗಿ ಖರೀದಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರುಣಾಕರ ರೆಡ್ಡಿ
ಹರಪನಹಳ್ಳಿ, ಮಾ.5- ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ನೆರವಿಗಾಗಿ ರಾಗಿ ಖರೀದಿ ಕೇಂದ್ರವನ್ನು ತೆರೆದಿದ್ದು, ತಾಲ್ಲೂಕಿನ ರೈತರು ನೇರವಾಗಿ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡುವ ಮೂಲಕ ಸದ್ಭಳಕೆ ಮಾಡಿಕೊಳ್ಳುವಂತೆ ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ನೂತನ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಮಾರುಕಟ್ಟೆಯ ದಲ್ಲಾಳಿ ಅಂಗಡಿಗಳಲ್ಲಿ 2,400 ರಿಂದ 2,500 ರಂತೆ ಖರೀದಿ ಮಾಡಲಾಗುತ್ತದೆ. ಆದರೆ ಸರ್ಕಾರ ಬೆಂಬಲ ಬೆಲೆಯಲ್ಲಿ ಪ್ರತಿ ಕ್ವಿಂಟಾಲ್ ರಾಗಿಗೆ 3,295 ರೂಪಾಯಿ ನಿಗದಿಪಡಿಸಿದ ದರದಲ್ಲಿ ಮಾರಾಟ ಮಾಡಿ ಮಧ್ಯವರ್ತಿಗಳ ಹಾವಳಿಯಿಂದ ಹೊರಬನ್ನಿ ಎಂದರು.
ತಾಲ್ಲೂಕಿನಾದ್ಯಂತ ಹಿಂಗಾರು ಹಾಗೂ ಮುಂಗಾರಿನಲ್ಲಿ 10 ಸಾವಿರ ಹೆಕ್ಟೇರ್ ರಾಗಿ ಬೆಳೆಯಲಾಗಿದೆ ಎಂಬ ವರದಿ ಅನ್ವಯ ಅಂದಾಜು 1 ಲಕ್ಷ ಟನ್‌ಗೂ ಅಧಿಕವಾಗಿ ಸಂಗ್ರಹಿಸುವ ಉದ್ದೇಶ ಹೊಂದಿದ್ದು, ಮಾರ್ಚ್ 31 ರ ವರೆಗೂ ರೈತರು ಹೆಸರು ನೋಂದಾಯಿಸಲು ಕಾಲಾವಕಾಶವಿದೆ ಎಂದರು. ರೈತರಿಗೆ ಅನ್ಯಾಯವಾಗದಂತೆ ನ್ಯಾಯಯುತವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರ್ ಎಲ್.ಎಂ. ನಂದೀಶ್ ಮಾತನಾಡಿ ರಾಗಿ ಖರೀದಿ ಕೇಂದ್ರದಲ್ಲಿ ಈಗಾಗಲೇ ಆನ್‌ಲೈನ್‌ನಲ್ಲಿ 1396 ರೈತರು ಹೆಸರು ನೋಂದಾಯಿಸಿದ್ದಾರೆ. ಹೋಬಳಿ ಮಟ್ಟದಲ್ಲೂ ರಾಗಿ ಖರೀದಿ ಕೇಂದ್ರ ತೆರೆಯಲು ಚರ್ಚಿಸಿ, ಪ್ರಾರಂಭಿಸಲಾಗುವುದು ಎಂದರು. ಉಪವಿಭಾಗಾಧಿಕಾರಿ ಚಂದ್ರಶೇಖರ್ ರೈತರಿಗೆ ಬೆಂಬಲ ಬೆಲೆಗೆ ರಾಗಿ ನೀಡಲು ಕಿವಿಮಾತು ಹೇಳಿದರು.
ಜಿ.ಪಂ. ಸದಸ್ಯ ಡಿ. ಸಿದ್ದಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷ ನಿಟ್ಟೂರು ಸಣ್ಣಹಾಲಪ್ಪ, ಜಿಲ್ಲಾ ಬಿಜೆಪಿ ಎಸ್ಟಿ ಘಟಕದ ಕಾರ್ಯದರ್ಶಿ ಆರ್. ಲೋಕೇಶ್, ತಾ.ಪಂ. ಸದಸ್ಯರುಗಳಾದ ವೈ. ಬಸಪ್ಪ, ಶಿಂಗ್ರಿಹಳ್ಳಿ ನಾಗರಾಜ್, ಭಾಗ್ಯಮ್ಮ, ಪುರಸಭೆ ಅಧ್ಯಕ್ಷ ಮಂಜುನಾಥ್ ಇಜಂತಕರ್, ಸದಸ್ಯರುಗಳಾದ ದ್ಯಾಮಜ್ಜಿ ರೊಕ್ಕಪ್ಪ, ಎಂ.ಕೆ. ಜಾವೀದ್, ಕೆಂಗಳ್ಳಿ ಪ್ರಕಾಶ್, ರಾಘವೇಂದ್ರ ಶೆಟ್ಟಿ, ಕಿರಣ್ ಕುಮಾರ್, ಕೃಷಿ ಇಲಾಖೆ ಅಧಿಕಾರಿ ಮಂಜುನಾಥ್ ಗೊಂದಿ, ಆಹಾರ ಇಲಾಖೆಯ ಸಂಜಯ್ ಬಾಗೇವಾಡಿ, ಹಮಾಲರ ಸಂಘದ ಕಾರ್ಯದರ್ಶಿ ಚಿಕ್ಕೇರಿ ಬಸಪ್ಪ, ತಿಂದಪ್ಪ, ಊರಪ್ಪ, ಹನುಮಂತ, ಗಿಡ್ಡಳ್ಳಿ ಅಂಜಿನಪ್ಪ ಮುಖಂಡ ರುಗಳಾದ ಯಡಿಹಳ್ಳಿ ಶೇಖರಪ್ಪ, ಯುಪಿ ನಾಗರಾಜ್, ಸಂತೋಷ್, ಮಜ್ಜಿಗೆರೆ ಭೀಮಪ್ಪ ಇನ್ನಿತರರಿದ್ದರು.