ಸಾರ್ವಜನಿಕ ದೂರುಗಳಿಗೆ `ಪರಿಹಾರ’

ಪೌರ ಸೌಕರ್ಯಗಳ ದೂರುಗಳಿಗೆ ವಾಟ್ಸಾಪ್ ಸಂಖ್ಯೆ 8277234444

ಕಡಿಮೆ ಸಮಯದಲ್ಲಿ ದೂರು ಪರಿಹಾರಕ್ಕೆ ಕ್ರಮ: ಮೇಯರ್ ವೀರೇಶ್

ವಾರ್ಡ್ ಭೇಟಿ

ವಾರದ ನಾಲ್ಕು ದಿನಗಳಲ್ಲಿ ಪ್ರತಿ ವಾರ್ಡ್‌ಗೂ ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡುವುದಾಗಿ ಮೇಯರ್ ಎಸ್.ಟಿ. ವೀರೇಶ್ ಹೇಳಿದರು. ಈ ಬಗ್ಗೆ ಸಮಯ ನಿಗದಿಪಡಿಸಿ ಕೊಂಡು ಭೇಟಿಗೂ ಮೊದಲೇ ಸಾರ್ವಜನಿಕರಿಗೆ ಮಾಹಿತಿ ನೀಡುವುದಾಗಿ ಹೇಳಿದರು.

ದಾವಣಗೆರೆ, ಮಾ.4- ಸಾರ್ವಜನಿಕರು ತಮ್ಮ ವಾರ್ಡ್‌ನಲ್ಲಿರುವ ಮೂಲ ಸೌಕರ್ಯಗಳ ಕುರಿತ ಸಮಸ್ಯೆಗಳನ್ನು `ಪರಿಹಾರ’ ವಾಟ್ಸಾಪ್ ಸಂಖ್ಯೆ 8277234444 ಮೂಲಕ ತಿಳಿಸಿದಲ್ಲಿ ಆದಷ್ಟು ಶೀಘ್ರವಾಗಿ ಪರಿಹರಿಸುವುದಾಗಿ ಮಹಾನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಹೇಳಿದ್ದಾರೆ.

ಪಾಲಿಕೆ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸಾರ್ವಜನಿಕರ ಸಮಸ್ಯೆಗಳನ್ನು ಅತಿ ಶೀಘ್ರದಲ್ಲಿ ಹೇಗೆ ಬಗೆಹರಿಸಬೇಕೆಂಬ ಬಗ್ಗೆ ಪಾಲಿಕೆ ಸದಸ್ಯರು, ಅಧಿಕಾರಿಗಳೊಂದಿಗೆ ಚರ್ಚಿಸಿದಾಗ, ಕೇಳಿ ಬಂದ ಸಲಹೆ ಮೇರೆಗೆ ವಾಟ್ಸಾಪ್‌ ಸಂಖ್ಯೆ ಕಾರ್ಯರೂಪಕ್ಕೆ ತರಲಾಗಿದೆ ಎಂದು ಹೇಳಿದರು.

ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳು, ರಸ್ತೆ, ರಸ್ತೆ ಗುಂಡಿಗಳ ಸ್ಥಿತಿಗತಿ, ಒಳ ಚರಂಡಿ ದುರಸ್ತಿ, ನೀರು ಸರಬರಾಜು, ಸ್ವಚ್ಛತೆ, ಬೀದಿ ದೀಪ, ಕೊಳವೆ ಮಾರ್ಗಗಳ ದುರಸ್ತಿ ಮೊದಲಾದ ಪೌರ ಸೌಕರ್ಯಗಳ ಕುರಿತು ದೂರುಗಳನ್ನು ನೂತನ ವಾಟ್ಸಾಪ್ ಸಂಖ್ಯೆಗೆ ಕಳುಹಿಸಬಹುದು.

ಸಾರ್ವಜನಿಕರಿಂದ ಬರುವ ದೂರುಗಳು ಕಚೇರಿಯಲ್ಲಿನ ಕಂಟ್ರೋಲ್ ರೂಂ ಮೂಲಕ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತಲುಪಲಿವೆ. ಅಧಿಕಾರಿಗಳು ಶೀಘ್ರವೇ ಸಮಸ್ಯೆಗಳನ್ನು ನಿವಾರಿಸಲಿದ್ದಾರೆ. ವಾಟ್ಸಾಪ್ ಮೂಲಕ ಅಷ್ಟೇ ಲ್ಲದೆ, ಸಾರ್ವಜನಿಕರು ಹಿಂದಿನಂತೆ ನೇರವಾಗಿಯೂ ದೂರು ಸಲ್ಲಿಸಬಹುದಾಗಿದೆ  ಎಂದು ಹೇಳಿದರು.

ಈ ಹಿಂದೆಯೂ ಪಾಲಿಕೆ ಸದಸ್ಯರು ತಮ್ಮ ವಾರ್ಡ್‌ಗಳ ಮಟ್ಟದಲ್ಲಿ ಅಧಿಕಾರಿಗಳು, ಸಾರ್ವಜನಿಕರನ್ನೊಳಗೊಂಡು ವಾಟ್ಸಾಪ್‌ ಗ್ರೂಪ್‌ಗಳನ್ನು ರಚಿಸಿಕೊಂಡು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಂಡು ಯಶ ಕಂಡಿದ್ದರು. ಅದೇ ಮಾದರಿಯನ್ನು ನಗರದಾದ್ಯಂತ ವಿಸ್ತರಿಸಲಾಗಿದೆ ಎಂದರು.

ರಾಜ್ಯಕ್ಕೆ ಪ್ರಥಮ ಸ್ಥಾನ ಹೆಮ್ಮೆಯ ವಿಚಾರ: ಸುಲಲಿತ ಜೀವನ ಸಮೀಕ್ಷೆಯಲ್ಲಿ ದಾವಣಗೆರೆ ರಾಷ್ಟ್ರದಲ್ಲಿ 9ನೇ ಸ್ಥಾನ ಹಾಗೂ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ ಎಂದು ಮೇಯರ್ ಎಸ್.ಟಿ. ವೀರೇಶ್ ಹೇಳಿದರು.

ಬೇರೆ ಕೆಲವು ಸಮೀಕ್ಷೆಗಳಲ್ಲಿ ನಗರ ಹಿಂದುಳಿದಿದೆ. ಅದನ್ನು ಸವಾಲಗಾಗಿ ಸ್ವೀಕರಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮನೆ ಬಾಗಿಲಿಗೆ ಪಾಲಿಕೆ ಸ್ಥಗಿತವಾಗದು: ಹಿಂದಿನ ಮೇಯರ್ ಆರಂಭಿಸಿದ ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ಯೋಜನೆ ಸ್ಥಗಿತಗೊಳ್ಳು ವುದಿಲ್ಲ. ಜನಾಭಿಪ್ರಾಯ ಸಂಗ್ರಹಿಸಿ ಈ ಯೋಜನೆಯಲ್ಲಿ ಮತ್ತಷ್ಟು ಮಾರ್ಪಾಡು ಮಾಡಿ ಮುಂದುವರೆಸುವ ಚಿಂತನೆ ಇರುವುದಾಗಿ ವೀರೇಶ್ ಹೇಳಿದರು.

ಜಾಗ ಒತ್ತುವರಿಯಾಗದಂತೆ ಕ್ರಮ: ನಮ್ಮ ಅವಧಿಯಲ್ಲಿ ಒಂದಿಂಚೂ ಸರ್ಕಾರಿ ಜಾಗ ಒತ್ತುವರಿಯಾಗದಂತೆ ನೋಡಿಕೊಳ್ಳಲಾಗುವುದು. ಈ ಹಿಂದಿನ ಅವಧಿಗಳಲ್ಲಿ ಒತ್ತುವರಿಯಾದ ಜಾಗವನ್ನು ಕಾನೂನು ಕ್ರಮಗಳನ್ನು ಅನುಸರಿಸಿ ತೆರೆವುಗೊಳಿಸಲಾಗುವುದು ಎಂದು ಹೇಳಿದರು.

ಬಜೆಟ್‌ಗೆ ಸಲಹೆ ನೀಡಲು ಮನವಿ: ಯಶಸ್ವಿ ಆಡಳಿತಕ್ಕೆ ಸಾರ್ವಜನಿಕರ ಸಹಭಾಗಿತ್ವ ಅತಿ ಮುಖ್ಯ. ಆದ್ದರಿಂದ ಇದೇ ತಿಂಗಳ ಅಂತ್ಯದಲ್ಲಿ ಪಾಲಿಕೆ ಬಜೆಟ್‌ ಸಭೆ ನಡೆಯಲಿದ್ದು, ನಗರಕ್ಕೆ ಅನುಕೂಲವಾಗುವಂತಹ ಯೋಜನೆಗಳ ಬಗ್ಗೆ ಸಾರ್ವಜನಿಕರು, ನೇರವಾಗಿ ಅಥವಾ ವಾಟ್ಸಾಪ್ ಮೂಲಕ ಸಲಹೆ ನೀಡುವಂತೆ ಅವರು ಮನವಿ ಮಾಡಿದರು.

ದಾಖಲೆಯಿಲ್ಲದ ಆರೋಪ: ಹಿಂದಿನ ಮೇಯರ್ ಬಿ.ಜಿ. ಅಜಯ್ ಕುಮಾರ್ ಡೋರ್‌ ನಂಬರ್  ನೀಡುವಲ್ಲಿ ಅಕ್ರಮವೆಸಗಿದ್ದಾರೆ ಎಂಬ ಕಾಂಗ್ರೆಸ್ ಮುಖಂಡ ಆರೋಪವನ್ನು ಅಲ್ಲಗಳೆದ ಮೇಯರ್ ವೀರೇಶ್,  ವಿರೋಧ ಪಕ್ಷಗಳಿಂದ ಆರೋಪಗಳು ಬರುವುದು ಸಹಜ. ದಾಖಲೆ ಸಹಿತ ಆರೋಪ ಮಾಡಿದಲ್ಲಿ ತನಿಖೆ ನಡೆಸಿ, ಅಕ್ರಮ  ನಡೆದಿದ್ದರೆ ಕ್ರಮ ತೆಗೆದುಕೊಳ್ಳಲು ಸಿದ್ಧವಿರುವುದಾಗಿ ಎಂದರು.

ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ಸಹ, ಹಿಂದಿನ ಮೇಯರ್ ಅವಧಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಎಲ್ಲವೂ ಕಾನೂನು ಬದ್ಧವೇ ನಡೆದಿದೆ ಎಂದು ಸ್ಪಷ್ಟಪಡಿಸಿದರು.

ಸನ್ಮಾನಕ್ಕೆ ಕರೆಯದಿರಿ : ಯಾವುದೇ ರೀತಿಯ ಸನ್ಮಾನ ಕಾರ್ಯ ಕ್ರಮಗಳಿಗೆ ತಮ್ಮನ್ನು ಆಹ್ವಾನಿಸದಂತೆ ಮೇಯರ್ ವೀರೇಶ್ ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. 

ನಗರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನಮಗೆ ಪ್ರತಿ ಕ್ಷಣವೂ ಅಮೂಲ್ಯವಾದದ್ದು. ಆದ್ದರಿಂದ ಕೆಲಸ ಕಾರ್ಯಮಾಡಲು ನಮಗೆ ಸಮಯ ಕೊಡಿ. ನನ್ನ ಕೆಲಸ ನೋಡಿ ನಂತರದ ವರ್ಷಗಳಲ್ಲಿ ಬೇಕಾದರೆ ಸನ್ಮಾನಿಸಿ ಎಂದವರು ಹೇಳಿದರು.

ಅಭಿನಂದಿಸಲು ಹಾರ-ಬೊಕ್ಕೆ ತರುವ ಬದಲು ನೋಟ್ ಪುಸ್ತಕಗಳನ್ನು ತರುವಂತೆ ನೀಡಿದ್ದ ಕರೆಗೆ ಉತ್ತಮ ಸ್ಪಂದನೆ ದೊರೆತಿದೆ.  ಸುಮಾರು 2 ಸಾವಿರದಷ್ಟು ನೋಟ್ ಪುಸ್ತಕಗಳನ್ನು ಸಾರ್ವಜನಿಕರು, ಅಭಿಮಾನಿಗಳು, ಹಿತೈಷಿಗಳು ಮಕ್ಕಳಿಗಾಗಿ  ನೀಡಿದ್ದಾರೆ ಎಂದು ಹೇಳಿದರು.

ಪಾಲಿಕೆ ಸದಸ್ಯರಾದ ಪ್ರಸನ್ನಕುಮಾರ್, ಕೆ.ಎಂ. ವೀರೇಶ್, ಶಿವಪ್ರಕಾಶ್, ಪಿಆರ್‌ಒ ಸುನೀಲ್ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!