ರಾಣೇಬೆನ್ನೂರು ನಗರಸಭೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ಪ್ರಕಾಶ್ ಬುರಡಿಕಟ್ಟಿ ಆಗ್ರಹ
ರಾಣೇಬೆನ್ನೂರು, ಏ.20- ನಗರದಲ್ಲಿ ಕೈಗೊಳ್ಳಲಾಗುತ್ತಿರುವ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಯ ನೀರು ಶುದ್ಧೀಕರಣಕ್ಕಾಗಿ ಔಷಧ ಖರೀದಿಸಲು 49.90 ಲಕ್ಷ ರೂಪಾಯಿ ಆಡಳಿತಾತ್ಮಕ ಮಂಜೂರಾತಿ ನೀಡುವುದು ಸರಿಯಲ್ಲ ಎಂದು ಆಡಳಿತ ಬಿಜೆಪಿ ಸದಸ್ಯ ಪ್ರಕಾಶ ಬುರಡಿಕಟ್ಟಿ ಆಕ್ಷೇಪ ವ್ಯಕ್ತಪಡಿಸಿದರು.
ನಗರದ ಗುಡ್ಡದ ಸ್ಮಾರಕ ಭವನದಲ್ಲಿಂದು ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ನಗರಸಭೆ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಕುಡಿಯುವ ನೀರಿನ ಕಾಮಗಾರಿ ಪೂರ್ಣ ಮುಗಿದಿದೆ ಎಂದು ಅಧಿಕಾರಿಗಳು ಹೇಳುತ್ತಿ ದ್ದಾರೆ. ಆದರೆ, ಪ್ರತಿ ವಾರ್ಡ್ನಲ್ಲೂ 50 ರಿಂದ 60 ಮನೆಗಳಿಗೆ ಇನ್ನೂ ನಲ್ಲಿ ಸಂಪರ್ಕ ನೀಡಿಲ್ಲ. ಪೈಪ್ಲೈನ್ ಕೆಲಸ ಬಾಕಿಯಿದೆ. ಆದ್ದರಿಂದ ಸಂಪೂರ್ಣ ಕಾಮಗಾರಿ ಮುಗಿಯುವವರೆಗೂ ಅವರಿಗೆ ಯಾವುದೇ ಅನುದಾನ ನೀಡಬಾರದು ಎಂದು ಪ್ರಕಾಶ ಬುರಡಿಕಟ್ಟಿ ಒತ್ತಾಯಿಸಿದರು.
ಇದಕ್ಕೆ ದನಿಗೂಡಿಸಿದ ಮಲ್ಲಣ್ಣ ಅಂಗಡಿ, ನಿರಂತರ ನೀರು ಪೂರೈಕೆ ಯೋಜನೆ ಕಾಮ ಗಾರಿ ನಿರ್ವಹಣೆ ಸಂಪೂರ್ಣ ಗುತ್ತಿಗೆದಾರರ ಮೇಲಿದೆ. ಆದರೂ ನಗರಸಭೆಯಿಂದ ಯಾಕೆ ಔಷಧ ನೀಡುತ್ತೀರಿ. ಇಷ್ಟೊಂದು ಹಣ ಕೊಡುವ ಅಗತ್ಯವೇ ಇಲ್ಲ. ಗುತ್ತಿಗೆದಾರರು ಈವರೆಗೂ ಸರಿಯಾಗಿ ಕಾಮಗಾರಿ ಮಾಡಿಲ್ಲ. ಎಲ್ಲೆಂದರಲ್ಲಿ ಪೈಪ್ ಒಡೆಯುತ್ತಿವೆ. ಎಷ್ಟು ಮನೆಗೆ ಸಂಪರ್ಕ ಕಲ್ಪಿಸಿದ್ದಾರೆ ಎಂಬ ಮಾಹಿತಿ ನೀಡಿಲ್ಲ. ಅಧಿಕಾರಿಗಳು ಇದರ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಆದ್ದರಿಂದ ನಲ್ಲಿ ಸಂಪರ್ಕ ಕೊಟ್ಟಿರುವ ಕುರಿತು ಸರ್ವೇ ಮಾಡಿಸಬೇಕು. ಅಲ್ಲಿಯವರೆಗೆ ನೀರು ಪೂರೈಕೆ ಆರಂಭಿಸಬಾರದು. ಬಿಲ್ ಸಹ ಪಾಸ್ ಮಾಡಬಾರದು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಜತೆ ಗುರುತಿಸಿಕೊಂಡಿರುವ ಕೆಪಿಜೆಪಿ ಸದಸ್ಯ ನಿಂಗರಾಜ ಕೋಡಿಹಳ್ಳಿ ಮಾತನಾಡಿ, ಕೊರೊನಾ ಬಗ್ಗೆ ಮುಂಜಾಗ್ರತೆ ಕ್ರಮವಾಗಿ ನಗರದಲ್ಲಿ ಏನು ಮಾಡಲಾಗಿದೆ? ಪೌರ ಕಾರ್ಮಿಕರ ರಕ್ಷಣೆಗಾಗಿ ಯಾವ ಕ್ರಮ ಅನುಸರಿಸಲಾಗುತ್ತಿದೆ ಎಂಬ ಕುರಿತು ಸಭೆಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರೂಪಾ ಚಿನ್ನಿಕಟ್ಟಿ, ಸರಕಾರದ ಆದೇಶದ ಪ್ರಕಾರ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಮಾಸ್ಕ್ ಹಾಕದವರಿಗೆ ದಂಡ ವಿಧಿಸಲಾಗುತ್ತಿದೆ ಎಂದರು.
ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ, ಆಯುಕ್ತ ಡಾ. ಎನ್. ಮಹಾಂತೇಶ ಹಾಗೂ ಎಲ್ಲ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆ ಆರಂಭಕ್ಕೂ ಮುನ್ನ ಬಿಜೆಪಿ ಜತೆ ಗುರುತಿಸಿಕೊಂಡಿರುವ ಕೆಪಿಜೆಪಿ ಸದಸ್ಯ ಸಿದ್ದಪ್ಪ ಬಾಗಿಲವರ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷ ರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.