ಪ್ಲವ ನಾಮ ಸಂವತ್ಸರ ಸರ್ವರಿಗೂ ಒಳಿತನ್ನು ಮಾಡಲಿ

ಉಜ್ಜಯಿನಿ ಪೀಠದ ಪರಿಸರದಲ್ಲಿ ಯುಗಾದಿ ಪರ್ವದ ಪಂಚಾಂಗ ಶ್ರವಣ ಕಾರ್ಯಕ್ರಮದಲ್ಲಿ ಉಜ್ಜಯನಿ ಶ್ರೀ

ಕೊಟ್ಟೂರು, ಏ.15 – ತಾಲ್ಲೂಕಿನ ಉಜ್ಜಯಿನಿ ಶ್ರೀ ಸದ್ಧರ್ಮ ಸಿಂಹಾಸನ ಮಹಾ ಸಂಸ್ಥಾನ ಪೀಠದಲ್ಲಿ ಯುಗಾದಿ ಹಬ್ಬದ ನಿಮಿತ್ತ ಪ್ರತಿ ವರ್ಷದ ಪದ್ಧತಿಯಂತೆ ನೂತನ ಸಂವತ್ಸರದ ಪಂಚಾಂಗ ಶ್ರವಣ ಕಾರ್ಯಕ್ರಮವು ಶ್ರೀ ಮದ್ ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ ಸರಳವಾಗಿ ನಡೆಯಿತು. 

ಕಾರ್ಯಕ್ರಮ ಕುರಿತು ಮಾತನಾಡಿದ ಅವರು- ಹೊಸ ವರ್ಷದ ಮೊದಲ ದಿನ ಹಾಗೂ ಬ್ರಹ್ಮಾಂಡವು ಸೃಷ್ಟಿಯಾದ ದಿನವಾಗಿರುವ ಯುಗಾದಿಯಂದು ಪ್ರಕೃತಿ ಮಾತೆಯು ನವಚೈತನ್ಯವನ್ನು ತುಂಬಿಕೊಂಡು, ಪೂರ್ಣ ಪ್ರಮಾಣದ ಬಿಸಿಲಿನಲ್ಲಿ ಹಸಿರು ಹಸಿರಾಗಿ ಕಂಗೊಳಿಸುತ್ತಾ ಫಲ-ಪುಷ್ಪಗಳನ್ನು ಮನುಕುಲಕ್ಕೆ ಉಡುಗೊರೆಯಾಗಿ ನೀಡುವ ಕಾಲವಿದು. ನಾವೆಲ್ಲಾ ಶಾರ್ವರಿ ನಾಮ ಸಂವತ್ಸರ ಕಳೆದು ಪ್ಲವನಾಮ ಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ವಸಂತ ಋತುವಿನ ಆರಂಭದ ದಿನವಾದ ಚೈತ್ರ, ಮಾಸ ಶುಕ್ಲ ಪಕ್ಷದ ಪಾಡ್ಯದಂದು ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದರು.

ವೇದಗಳ ಪ್ರಕಾರ, ಧರ್ಮಗ್ರಂಥಗಳ ಪ್ರಕಾರ ಯುಗಾದಿ ಹಬ್ಬವು ಹಲವು ಮಹತ್ತರಗಳಿಗೆ ಸಾಕ್ಷಿಯಾಗಿದೆ. ಬ್ರಹ್ಮ ದೇವ ಈ ಜಗತ್ತನ್ನು ಚೈತ್ರ ಶುಕ್ಲ ಪ್ರತಿಪದ ಅಂದರೆ ಯುಗಾದಿಯಂದು ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದನಂತೆ. ಬ್ರಹ್ಮ ದೇವನು ಅಂದೇ ಗ್ರಹ , ನಕ್ಷತ್ರ, ಮಾಸ, ಋತು, ವರ್ಷಾಧಿಪತಿಯನ್ನ ಸೃಷ್ಟಿಸಿ ಕಾಲಗಣನೆಯನ್ನು ಆರಂಭಿಸಿದ. ನಂತರ ಜೀವರಾಶಿ, ಜಲರಾಶಿ, ಸಸ್ಯರಾಶಿ, ಬೆಟ್ಟ ಗುಡ್ಡಗಳನ್ನು ಸೃಷ್ಟಿಸಲು ಆರಂಭಿಸಿದ ಎಂದು ಪುರಾಣಗಳಲ್ಲಿ ಹೇಳಲಾಗಿದೆ ಎಂದರು.

ಯುಗಾದಿ ಹಬ್ಬದಂದು ಪಂಚಾಂಗ ಪಠಣ ಹಾಗೂ ಶ್ರವಣದಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತವೆಂಬ ಮಾತನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಅಂತಹ ಕಾರ್ಯದಿಂದ, ತಿಥಿಯ ಬಗ್ಗೆ ತಿಳಿದುಕೊಳ್ಳುವುದರಿಂದ ಶ್ರೇಯಸ್ಸು. ವಾರದ ಸ್ಪಷ್ಟ ಕಲ್ಪನೆಯಿಂದ ಆಯುಷ್ಯ ವೃದ್ದಿ ನಕ್ಷತ್ರಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಪಾಪ ಪರಿಹಾರ. ಯೋಗದ ಬಗ್ಗೆ ಅರಿತರೆ ರೋಗ ನಿವಾರಣೆ. ಕರಣದ ಬಗ್ಗೆ ತಿಳಿಯುವುದರಿಂದ ಕಾರ್ಯ ಸಿದ್ದಿಯಾಗುತ್ತೆ ಎಂದು ನೆರೆದ ಭಕ್ತ ಸಮೂಹಕ್ಕೆ ಆಶೀರ್ವಚನ ದಯಪಾಲಿಸಿದರು.

ಸರಳ ಸುಂದರ ಕಾರ್ಯಕ್ರಮದಲ್ಲಿ ಶ್ರೀಪೀಠದ ಪುರೋಹಿತರಾದ ಶ್ರೀ ವೇದಮೂರ್ತಿ ಯು.ಎನ್ .ಸಿದ್ದಲಿಂಗಯ್ಯ ಮತ್ತು ಜ್ಯೋತಿಷ್ಯ ಪಂಡಿತರಾದ ವೇದಮೂರ್ತಿ ಸ್ವಾಮಿ ಗಡಿಮಾಕುಂಟೆ ಉಜ್ಜಯಿನಿಯ ನಿವೃತ್ತ ಶಿಕ್ಷಕ ಬಿ.ಎಂ. ವೀರಯ್ಯಸ್ವಾಮಿ ಮತ್ತು ರೇವಯ್ಯ ಒಡೆಯರ್,  ಮರುಳಸಿದ್ದಪ್ಪ ವಕೀಲರು, ಕಾಳಾಪುರ ವೀರಯ್ಯ ಹಾಗೂ ಶ್ರೀ ಪೀಠದ ಸಹ ವ್ಯವಸ್ಥಾಪಕ ಬಿ. ವೀರೇಶ್ ಮತ್ತು ಶ್ರೀ ಪೀಠದ ಪ್ರಧಾನ ಅರ್ಚಕ ರಾಚೋಟಪ್ಪ ಹಾಗೂ ಶ್ರೀ ಪೀಠದ ಸದ್ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!