ಹಡಗಲಿ: ನಿಸರ್ಗ ಬಳಗದಿಂದ ಪಕ್ಷಿಗಳಿಗೆ ನೀರು, ಆಹಾರ

ಹೂವಿನಹಡಗಲಿ, ಏ.14-  ಬಿಸಿಲಿನ ತಾಪ ಹೆಚ್ಚುತ್ತಲೇ ಇದೆ. ರಸ್ತೆ ಅಗಲೀಕರಣದಿಂದ ನೆರಳು ನೀಡುವ ಮರಗಳು ಇಲ್ಲದೆ, ಜನ-ಜಾನುವಾರುಗಳು ನೆರಳು-ನೀರಿಗಾಗಿ ಚಡಪಡಿಸುವಂತಾಗಿದೆ.

ಬಿಸಿಲಿನ ಜಳಕ್ಕೆ ಮನುಷ್ಯನೇ ಕಂಗಾಲಾಗುತ್ತಿದ್ದಾನೆ. ಮನುಷ್ಯರಾದರೆ ತಮ್ಮ ದಾಹವನ್ನು ಬೇಕಾದ ರೀತಿಯಲ್ಲಿ ತೀರಿಸಿಕೊಳ್ಳುತ್ತಾರೆ. ಆದರೆ ಬಾಯಿಲ್ಲದ ಮೂಕ ಪ್ರಾಣಿ-ಪಕ್ಷಿಗಳ ಪಾಡೇನು?

ಇದನ್ನರಿತ ನಿಸರ್ಗ ಪ್ರಿಯರು, ಪ್ರಾಣಿ ದಯಾ ಸಂಸ್ಥೆಯವರು ಸಾಕಷ್ಟು ಪುಣ್ಯದ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಅದೇ ರೀತಿ ಹಡಗಲಿಯ ನಿಸರ್ಗ ಬಳಗವು ನೂರಾರು ಪಕ್ಷಿಗಳಿಗೆ ಅನುಕೂಲವಾಗಲೆಂದು ನೀರು ಸಂಗ್ರಹ ಪೆಟ್ಟಿಗೆ ಮತ್ತು ಆಹಾರ ಸಂಗ್ರಹ ಪೆಟ್ಟಿಗೆಗಳನ್ನು ಪಟ್ಟಣದ ಆಯ್ದ ಸ್ಥಳಗಳಲ್ಲಿರುವ ಮರಗಳಿಗೆ ಕಟ್ಟಿದ್ದಾರೆ. 

ಬಳಗದ ನೇತೃತ್ವವನ್ನು ದಾನಿಗಳು, ಅಧ್ಯಕ್ಷರೂ ಆದ ಮಹಾಬಲೇಶ್ವರ್, ಎನ್. ದಿವಾಕರ್ ಪಕ್ಷಿಗಳ ದಾಹ ತಡೆಯೋಣ ಬನ್ನಿ ಕೈ ಜೋಡಿಸೋಣ ಎಂಬ ಧ್ಯೇಯ ವಾಕ್ಯದೊಂದಿಗೆ ಮುಂದಾಗಿದ್ದಾರೆ. ಬಳಗದ ಸ್ನೇಹಿತರಾದ ವಲಿಬಾಷಾ, ಸಂತೋಷ್, ಕುಮಾರ್, ಕಿರಣ್, ನಂದೀಶ್‌ ನವಲಿ, ಜೆ. ಪ್ರದೀಪ್, ಬಸವರಾಜ ಚಿಂತಿ, ರವಿರಾಜ್ ಅವರು ಸಾಥ್ ನೀಡಿದ್ದಾರೆ. ಇವರುಗಳಿಗೆ ಸ್ಥಳೀಯ ಶಾಖಾ ಗವಿಮಠದ ಶ್ರೀಗಳಾದ ಡಾ. ಹಿರಿಶಾಂತ ವೀರಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಳಗದ ಪುಣ್ಯದ ಕೆಲಸ ಇತರರಿಗೆ ಸ್ಫೂರ್ತಿಯಾಗಿದೆ ಎಂದಿದ್ದಾರೆ. 

ನೀರನ್ನು ಪೂರೈಸುವ ಮೂಲಕ ಪಕ್ಷಿಗಳ ಜೀವವನ್ನು ಉಳಿಸುವುದು ಮಾನವರಾದ ನಮ್ಮ ಧರ್ಮ ಎಂದು ಶ್ರೀಗಳು ಹೇಳಿದ್ದಾರೆ. ಗವಿಮಠದಲ್ಲೂ ಆಹಾರ ಮತ್ತು ನೀರಿನ ಡಬ್ಬಿಗಳನ್ನು ಅಳವಡಿಸಿದ್ದಾರೆ. ಪೊಲೀಸ್ ಠಾಣೆಗೆ ಆಗಮಿಸಿದ ನಿಸರ್ಗ ಬಳಗದ ಕಾಯಕವನ್ನು ಮೆಚ್ಚಿದ ಸರ್ಕಲ್ ಇನ್‌ಸ್ಪೆಕ್ಟರ್ ರಾಮರೆಡ್ಡಿ ಅವರು, ಠಾಣೆಯ ಗಿಡ, ಮರಗಳಿಗೂ ನೀರಿನ ಪೆಟ್ಟಿಗೆಗಳನ್ನು ಅಳವಡಿಸಿದ್ದಾರೆ. ಜೆಎಸ್‌ಎಸ್‌ ಕಾಲೇಜು, ಪುರಸಭೆಯಲ್ಲೂ ಅಧ್ಯಕ್ಷ ವಾರದ ಗೌಸ್ ಮೊಹಿದ್ದೀನ್ ಸೇರಿದಂತೆ ಪುರಸಭಾ ಸದಸ್ಯರಾದ ಕೆ. ಹನುಮಂತಪ್ಪ, ಅರಣಿ ರಫಿ ಮತ್ತು ಆರೋಗ್ಯಾಧಿಕಾರಿ ಡಿ.ಎಂ. ಶ್ರೀನಿವಾಸ್ ಹಾಗು ಇನ್ನಿತರೆ ಸಿಬ್ಬಂದಿಗಳು ಪಾಲ್ಗೊಂಡು ಪೆಟ್ಟಿಗೆಗಳನ್ನು ಅಳವಡಿಸಿದರು.

ಹಾಗೆಯೇ ಜಿಬಿಆರ್ ಕಾಲೇಜು, ಅರಣ್ಯ ಇಲಾಖೆಗಳಲ್ಲದೇ, ಇನ್ನಿತರೆ ಕಚೇರಿಗಳಿಗೆ ತೆರಳಿ ಕಚೇರಿ ಆವರಣದ ಗಿಡಮರಗಳಿಗೆ ನೀರು ಮತ್ತು ಆಹಾರದ ಪೆಟ್ಟಿಗೆಗಳನ್ನು ಅಳವಡಿಸಲಾ ಯಿತೆಂದು ತಿಳಿದು ಬಂದಿದೆ. ಒಟ್ಟಾರೆ ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಪಾಟೀಲ್, ಪೊಲೀಸ್ ಪೇದೆ ನಾಗರಾಜ್ ಇನ್ನಿತರರು ಸಹಕಾರ ನೀಡಿದರು.

error: Content is protected !!