ಒತ್ತಡದ ಜೀವನವು ರೋಗಗಳನ್ನು ಆಹ್ವಾನಿಸಿದಂತೆ

ಹರಪನಹಳ್ಳಿ, ಏ.12- ಜಾಗತೀಕರಣದ ಪ್ರಭಾವದಿಂದ ದೇಶ ಅಭಿವೃದ್ಧಿಯಾಗಿದೆ ಯಾದರೂ, ಭಾರತೀಯರ ನೆಮ್ಮದಿಯ ಮಟ್ಟ ಮತ್ತು ಮಾನವೀಯ ಮೌಲ್ಯಗಳು ಕುಸಿದಿವೆ ಎಂದು ಬೆಂಗಳೂರಿನ ಚಿಂತಕ ಎಚ್.ಕೆ. ವಿವೇಕ್‌ ವಿಷಾದ ವ್ಯಕ್ತಪಡಿಸಿದರು.

ತಾಲ್ಲೂಕಿನ ಬಾಗಳಿ ಗ್ರಾಮದಲ್ಲಿ ಬೀದರ್‍ನಿಂದ ಚಾಮರಾಜ ನಗರದವರೆಗೆ  ಎಚ್.ಕೆ ವಿವೇಕ್‌ರವರ ಪಾದಯಾತ್ರೆಯನ್ನು ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್‍ವತಿಯಿಂದ ಸ್ವಾಗತ ಮತ್ತು ಮಾನವೀಯ ಮೌಲ್ಯಗಳ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಂದಿನ ವಿದ್ಯಾರ್ಥಿ, ಯುವ ಜನರ ಬಳಿ ಮೊಬೈಲ್ ಇರುವುದು ಸಂತೋಷವೇ. ಆದರೆ ಅವರ ವ್ಯಕ್ತಿತ್ವ ಮತ್ತು ಮೌಲ್ಯಗಳು, ನೆಮ್ಮದಿಯ ಸುಖಜೀವನ ಇಲ್ಲದಂತಾಗಿದೆ. 

ಒತ್ತಡದ ಜೀವನಕ್ಕೆ ಮಾರುಹೋಗಿ ಅನೇಕ ರೋಗಗಳನ್ನು ತಂದುಕೊಳ್ಳುವತ್ತಾ ಸಾಗುತ್ತಿದ್ದೇವೆ ಎಂದ ಅವರು ಮನದಲ್ಲಿ, ಮನೆಯಲ್ಲಿ ಹಾಗೂ ಮತದಲ್ಲಿ ಬದಲಾವಣೆ ಮಾಡಿದಲ್ಲಿ ಮುಂದಿನ ವಿದ್ಯಾರ್ಥಿ, ಯುವ ಪೀಳಿಗೆಗೆ ಉತ್ತಮ ಮೌಲ್ಯಗಳನ್ನು ಉಳಿಸಿ ಕೊಡುವ ಪ್ರಯತ್ನದತ್ತ ನಮ್ಮ ಹೆಜ್ಜೆಯಾಗಿದೆ ಎಂದ ಅವರು, ನಾವು ಸಂಬಂಧ, ಸಂಯಮ, ತ್ಯಾಗ, ಪ್ರೀತಿಯಂತಹ ಮಾನವೀಯತೆ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು, ಪ್ರಾಣಿಗಳಿಗಿಂತ ಕಡೆಯಾಗಬಾರದು ಎಂದು ಕಿವಿಮಾತು ಹೇಳಿದರು. ಹಿಂದೆ ನೀರಿಗೆ ಭೇದಭಾವ ಇರಲಿಲ್ಲ. ಇಂದು ಮಿನರಲ್ ವಾಟರ್ ಜತೆಗೆ ವಿಷವುಳ್ಳ ನೀರು, ಆಹಾರ ಸಿಗುತ್ತಿದೆ. ಐವತ್ತು ವರ್ಷಗ ಳಿಂದ ಗುಣಮಟ್ಟ ಹೆಚ್ಚಾಗಬೇಕಿದೆ. ಆದರೆ ಭ್ರಷ್ಟಾಚಾರ ವ್ಯಾಪಕವಾಗಿದೆ. ಸಾರಾಯಿ ಅಂಗಡಿ ಗ್ರಾಮದ ಹೊರಗೆ ಇದ್ದವು, ಆದರೆ ಗ್ರಾಮದ ನಡುವೆ ಬಂದಿರುವುದು ದುರಂತ ಎಂದರು.

ಹಿಂದಿನ ದಿನಗಳಲ್ಲಿ ಗೌರವಯುತವಾಗಿ ಮಹಿಳೆಯನ್ನು ಕಾಣಲಾಗುತ್ತಿತ್ತು. ಇಂದು ನೂರಾರು ಧಾರಾವಾಹಿಗಳಲ್ಲಿ ವಿವಿಧ ಪಾತ್ರ ಗಳಲ್ಲಿ ವಿಲನ್ ಆಗಿ ವಿಜೃಂಭಿಸಲಾಗುತ್ತಿದೆ. ಇದರಿಂದ ಕುಟುಂಬಗಳು ಒಡೆದು ಯುವ ಸಮೂಹ ಹಾಳಾಗುತ್ತಿದೆ. ಇದರಿಂದ ಹೊರಬಂದು ಎಲ್ಲರೂ ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ, ಮಹಿಳೆಯರು ವಿದ್ಯಾವಂತರಾಗಬೇಕು ಎಂದರು.

ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ್ ಮಾತನಾಡಿ, ಎಚ್.ಕೆ.ವಿವೇಕ್‌ರವರು ಕಳೆದ ನ.1ರಿಂದ ಇಲ್ಲಿಯವರೆಗೂ 4800 ಕಿ.ಮೀ. ಪಾದಯಾತ್ರೆಯ ಮುಖಾಂತರ ವಿದ್ಯಾರ್ಥಿ, ಯುವಕ ಮತ್ತು ಮಹಿಳೆಯರಲ್ಲಿ ಮಾನವೀಯ ಮೌಲ್ಯಗಳ ಬಗ್ಗೆ ಸಂವಾದದ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಆವರಗೆರೆ ರುದ್ರಮುನಿ, ಸಿದ್ದಲಿಂಗನಗೌಡ, ದಾದಾಪೀರ್‌, ರತ್ನಮ್ಮ ಸೇರಿದಂತೆ ಇತರರು ಇದ್ದರು.

error: Content is protected !!