ಜಗಳೂರಿನ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಜಿ.ತಿಮ್ಮಯ್ಯ ಆಶಯ
ಜಗಳೂರು, ಫೆ.1 – ಯುವಕರು ದುಶ್ಚಟಗಳಿಂದ ದೂರವಾಗಿ ಉತ್ತಮ ಅಭ್ಯಾಸ ನಿರತರಾಗಿ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಆದರ್ಶ ವ್ಯಕ್ತಿಗಳಾಗ ಬೇಕು ಎಂದು ಜೆಎಂಎಫ್ಸಿ ಮತ್ತು ಸಿವಿಲ್ ನ್ಯಾಯಾಧೀಶ ಜಿ.ತಿಮ್ಮಯ್ಯ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸಮಿತಿ ಹಾಗೂ ವಕೀಲರ ಸಂಘ, ಸರ್ಕಾರಿ ಪದವಿ ಪೂರ್ವ ಕಾಲೇಜು ಇವರುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಮತದಾರರ ದಿನಾಚರಣೆ ಪ್ರಯುಕ್ತ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರ ಹಾಗೂ ಬುದ್ದನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ನಿರಂ ತರ ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯವೇ ವಿನಃ ಅಡ್ಡ ದಾರಿಗಳಿಂದಲ್ಲ. ಕಾನೂನು ಅಜ್ಞಾ ನಕ್ಕೆ ಕ್ಷಮಾಪಣೆಯಿಲ್ಲ. ವಿದ್ಯಾವಂತರಿಂದಲೇ ಹೆಚ್ಚಾಗಿ ಕಾನೂನು ಅಪಕೃತ್ಯಗಳು ನಡೆಯುತ್ತಿ ರುವುದು ಆತಂಕಕಾರಿಯಾಗಿದೆ ಎಂದರು.
ಅಭಿವ್ಯಕ್ತಿ ಮತ್ತು ಮತದಾನದ ಹಕ್ಕುಗಳ ಸ್ವಾತಂತ್ರ್ಯ ಕಲ್ಪಿಸಿದ ಶ್ರೇಷ್ಠ ಪುಸ್ತಕ ಸಂವಿಧಾನ. ಮತದಾರರಿಂದ ಭ್ರಷ್ಟಾಚಾರ ಆರಂಭವಾಗುತ್ತದೆ. ಆಡಳಿತ ವ್ಯವಸ್ಥೆಗೆ ಮತದಾರರೇ ನೇರ ಕಾರಣ. ಚುನಾವಣೆ ಸಂದರ್ಭದಲ್ಲಿ ಕ್ಷಣಿಕ ಆಮಿಷಗಾಗಿ ಅಮೂಲ್ಯ ಮತವನ್ನು ಮಾರಾಟ ಮಾಡಿಕೊಳ್ಳುವುದು ಸರಿಯಲ್ಲ ಎಂದರು.
ವಕೀಲರ ಸಂಘದ ಕಾರ್ಯದರ್ಶಿ ವಿ.ತಿಪ್ಪೇಸ್ವಾಮಿ ಪ್ರಾಸ್ತಾವಿಕ ವಾಗಿ ಮಾತನಾಡಿ, ಕಾನೂನು ಪ್ರತಿಯೊಬ್ಬ ವ್ಯಕ್ತಿಗೆ ಪ್ರತಿ ಕ್ಷಣದಲ್ಲಿಯೂ ನೆರವಾಗುತ್ತದೆ, ಗ್ರಾಮೀಣ ಭಾಗಕ್ಕೆ ಕಾನೂನಿನ ಅರಿವು ಪಸರಿಸಲು ಕಾಲೇಜು ವಿದ್ಯಾರ್ಥಿಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿನಿಯರು ಅಭಿಪ್ರಾಯ ವ್ಯಕ್ತಪಡಿಸಿ, ಉನ್ನತ ವ್ಯಕ್ತಿಯಿಂದ, ಕಟ್ಟಕಡೆಯ ವ್ಯಕ್ತಿಗೂ ಒಂದೇ ಕಾನೂನು ಅನ್ವಯವಿರುವ ಭಾರತ ದೇಶದ ಸಂವಿಧಾನ ಶ್ರೇಷ್ಠವಾದದ್ದು, ಅನಕ್ಷರಸ್ಥರಷ್ಟೇ ಅಲ್ಲದೆ ಅಕ್ಷರಸ್ಥರೂ ಕೂಡ ಮೋಸ, ವಂಚನೆ, ಅತ್ಯಾಚಾರದಂತಹ ಪ್ರಕರಣಗಳಲ್ಲಿ ಭಾಗಿಯಾಗುವುದು ನಿಲ್ಲಬೇಕಿದೆ ಎಂದರು.
ಸಮಾರಂಭದಲ್ಲಿ ಪ್ರಾಂಶುಪಾಲ ಜಗದೀಶ್, ಹಿರಿಯ ವಕೀಲ ವೈ. ಹನುಮಂತಪ್ಪ ವಕೀಲರಾದ ರುದ್ರೇಶ್, ನಾಗರತ್ನಮ್ಮ, ಉಮೇಶ್, ಕರಿಬಸಪ್ಪ, ಅರುಣ್ ಕುಮಾರ್, ಮಹಾಂತೇಶ್, ಉಪನ್ಯಾಸಕರಾದ ಸಿ.ಬಿ.ರವಿ, ರಮೇಶ್, ಸೇರಿದಂತೆ, ಇತರರಿದ್ದರು.