ಹರಪನಹಳ್ಳಿ : ಕದಳಿ ವೇದಿಕೆ ಕಾರ್ಯಕ್ರಮದಲ್ಲಿ ಲಿಂಗನಾಯಕನಹಳ್ಳಿ ಶ್ರೀ ಚನ್ನವೀರ ಸ್ವಾಮೀಜಿ
ಹರಪನಹಳ್ಳಿ, ಮಾ.27- ಆತ್ಮ ಕಲ್ಯಾಣವಾಗಲು ಗುರುವಿನ ಕಾಯಕ ಅವಶ್ಯಕ. ಹರ ಮುನಿದರೆ ಗುರು ಕಾಯುವನು. ಹಾಗಾಗಿ ಗುರುವಿಗಿಂತ ಮಿಗಿಲಾದದ್ದು ಯಾವುದು ಇಲ್ಲವೆಂದು ಲಿಂಗನಾಯಕನಹಳ್ಳಿಯ ಶ್ರೀ ಚನ್ನವೀರ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಹೊರ ವಲಯದಲ್ಲಿರುವ ಹಾಲುವರ್ತಿ ಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆ ಸಹಯೋಗದೊಂದಿಗೆ ಶಿವಾನುಭವ ಸಂಪದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವೇದ, ಉಪನ್ಯಾಸಗಳು ಗುರುವಿನ ಬಗೆಗೆ ವಿಶೇಷ ಪ್ರಾಧಾನ್ಯತೆ ತೋರಿಸಿವೆ, ಸಮಾಜದಲ್ಲಿ ಒಳ್ಳೆ ಕಾರ್ಯಗಳು ನಡೆಯುವಾಗ ಹಲವಾರು ವಿಘ್ನಗಳು ಬರುವುದು ಸಹಜ. ಅದಕ್ಕೆ ತಲೆಕೊಡದೇ ಶಾಂತ ಚಿತ್ತದಿಂದ ಮುನ್ನಡೆದಾಗ ಬದುಕಿನ ಹಾದಿ ಸುಗಮವಾಗುತ್ತದೆ ಎಂದರು.
ಪ್ರಸ್ತುತ ಕಾಲಘಟ್ಟದಲ್ಲಿ ಮೋಸವೆಂಬ ಮಾಹೆ ತಾಂಡವಾಡುತ್ತಿದೆ, ಪ್ರತಿಯೊಂದು ಕಾರ್ಯದಲ್ಲಿ ಬಸವ ತತ್ವದ ಕಾರ್ಯಗಳು ಸಾಗುತ್ತಿವೆ. ಶಬ್ದ, ಸ್ಪರ್ಶ, ರೂಪ, ರಸಗಳ ಹುಡುಕಾಟಕ್ಕಾಗಿ ಮನುಷ್ಯ ಕಣ್ಣೀರು ಹಾಕುತ್ತಿದ್ದಾನೆ.ಇವುಗಳು ಸಂಸಾರದ ಸಾರಗಳಾಗಿವೆ ಎಂದರು.
ನೀಲಗುಂದ ಗುಡ್ಡದ ವಿರಕ್ತ ಮಠದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ, ಜ್ಞಾನಿಗಳು ಮೌನಿಗಳಾದರೆ ಮೂರ್ಖರ ಸಂಖ್ಯೆ ಅಧಿಕ ವಾಗುತ್ತದೆ, ಸತ್ಯದ ಹಾದಿಯನ್ನು ಯಾವುತ್ತೂ ಮರೆಯಬಾರದು, ಸೃಷ್ಠಿಯೇ ದೇವರು ಎಂದರು.
ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಷಣ್ಮುಖಪ್ಪ ಪೂಜಾರ್, ಪುರಸಭೆಯ ಮಾಜಿ ಅಧ್ಯಕ್ಷ ಹರಾಳು ಅಶೋಕ್, ಉಪನ್ಯಾಸಕ ಭೀಮಪ್ಪ, ಕೆ.ಎಂ. ಗುರುಸಿದ್ದಯ್ಯ, ಕದಳಿ ವೇದಿಕೆ ತಾಲ್ಲೂಕು ಅಧ್ಯಕ್ಷೆ ಜಯಶ್ರೀ, ಬಣಕಾರ್ ರಾಜಶೇಖರ್, ಬಾಗಳಿ ಕಲಾವಿದರಾದ ಬಣಕಾರ ರೇವಣ್ಣ, ಮಂಜಣ್ಣ, ವಿ ಬಿ ವೀರೇಶ್, ಡಾ. ಎ.ಕೆ. ಸಂತೋಷ್, ಬಸವರಾಜಪ್ಪ, ಶೋಭಾ, ಅನುಪಮಾ, ನೇತ್ರಾವತಿ, ಗೌರಮ್ಮ, ರೇಖಾ, ದೇವಿಕಾ ಶಾನಭಾಗ್, ದಿವಾಕರ್ ಶಾನಭಾಗ್, ಚನ್ನಪ್ಪ ಇತರರಿದ್ದರು.