ಹರಿಹರ, ಮಾ. 27 – ಷೇರು ಮಾರುಕಟ್ಟೆಯು ಷೇರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಇರುವ ವೇದಿಕೆಯಾಗಿದ್ದು, ಹಣಕಾಸಿನ ಬೆಳವಣಿಗೆಯನ್ನು ಗುರಿಯಾಗಿಟ್ಟುಕೊಂಡು ಹೂಡಿಕೆದಾರರೊಂದಿಗೆ ಬಂಡವಾಳ ವನ್ನು ಹುಡುಕುವ ಕಂಪನಿಗಳಿಗೆ ಇದು ಸೇತುವೆಯಾಗಿದೆ. ಇಂತಹ ಕ್ಷೇತ್ರವನ್ನು ಯುವಕರು ಸ್ವಯಂ ಉದ್ಯೋಗವಾಗಿ ಸ್ವೀಕರಿಸಬಹುದಾಗಿದೆ ಎಂದು ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಟಿ. ಕರಿಬಸಪ್ಪ ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ‘ಷೇರು ಮಾರುಕಟ್ಟೆಯ ಜಾಗೃತಿ’ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಷೇರು ಮಾರುಕಟ್ಟೆಯು ಆರ್ಥಿಕ ವಿನಿಮಯಕ್ಕೆ ಪ್ರಮುಖ ಸ್ಥಳವಾಗಿದೆ, ವ್ಯವಹಾರಗಳನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ ಮತ್ತು ಹೂಡಿಕೆದಾರರಿಗೆ ಸಂಪತ್ತು ಕ್ರೋಢೀಕರಣಕ್ಕೆ ಅವಕಾಶಗಳನ್ನು ನೀಡುತ್ತದೆ. ಷೇರು ಮಾರುಕಟ್ಟೆಯ ಮಾಹಿ ತಿಯನ್ನು ನಿಮ್ಮ ಕೈಯಲ್ಲಿರುವ ಮೊಬೈಲ್ ಅನ್ನು ಬಳಸಿ ಜ್ಞಾನ ವಿಸ್ತರಿಸಿಕೊಂಡು ಸ್ವಾವಲಂಬಿಗಳಾಗಿ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಷೇರು ಮಾರುಕಟ್ಟೆಯು ಉತ್ತಮ ಆಯ್ಕೆ ಎನ್ನಬಹುದು. ವಾಣಿಜ್ಯಶಾಸ್ತ್ರ ಅಧ್ಯಯನ ವಿದ್ಯಾರ್ಥಿಗಳು ಸುಲಭವಾಗಿ ಇದರ ಸದುಪಯೋಗ ಪಡೆಯಬಹುದು. ಈ ಕ್ಷೇತ್ರಕ್ಕೆ ಜನ ಸಾಮಾನ್ಯರು ತೊಡಗಬಹುದು. ಅಮೇರಿಕಾದಂತಹ ದೇಶದಲ್ಲಿ ಶೇ.55 ರಷ್ಟು ಜನಸಂಖ್ಯೆ ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗ ಮಾಡುವುದನ್ನು ಕಾಣಬಹುದು. ಹೀಗಾಗಿ ಅಲ್ಲಿ ಸಾಕಷ್ಟು ಉದ್ಯಮ-ಉದ್ಯೋಗಳ ಸೃಷ್ಠಿ ಸಾಧ್ಯವಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎನ್. ರಮೇಶ್ ಮಾತನಾಡಿ, ದೊಡ್ಡ ದೊಡ್ಡ ಉದ್ಯಮಗಳು ತಮಗೆ ಬೇಕಾಗುವ ನಿಧಿಯನ್ನು ಸಂಗ್ರಹಿಸಲು ಮತ್ತು ಹೂಡಿಕೆದಾರರಿಗೆ ಹೂಡಿಕೆ ಅವಕಾಶಗಳನ್ನು ಹುಡುಕಲು ಷೇರು ಮಾರುಕಟ್ಟೆ ಸಾಕಷ್ಟು ಅವಕಾಶಗಳನ್ನು ಸೃಷ್ಠಿ ಮಾಡಿದೆ. ಅಲ್ಪ ಪ್ರಮಾಣದ ಹೂಡಿಕೆಯು ಉತ್ತಮ ಲಾಭ ನೀಡುವ ಕ್ಷೇತ್ರ ಇದಾಗಿದ್ದು, ವ್ಯವಹಾರ ಶಾಸ್ತ್ರ ಅಧ್ಯಯನದ ವಿದ್ಯಾರ್ಥಿಗಳು ಈ ಬಗೆಯ ವಿಶೇಷ ಉಪನ್ಯಾಸವನ್ನು ಸದು ಪಯೋಗ ಮಾಡಿಕೊಳ್ಳಿ ಎಂದು ಹೇಳಿದರು.
ಐ.ಕ್ಯೂ.ಎ.ಸಿ ಸಹ ಸಂಯೋಜಕ ಅಬ್ದುಲ್ ಬಷೀರ ಅವರು ಮಾತನಾಡಿ, ಬಡವನಾಗಿ ಹುಟ್ಟುವುದು ತಪ್ಪಲ್ಲ, ಬಡವನಾಗಿ ಸಾಯುವುದು ತಪ್ಪು ಎಂಬ ಅರ್ಥಶಾಸ್ತ್ರಜ್ಞ ಆಡ್ಯಂ ಸ್ಮಿತ್ ಅವರ ಹೇಳಿಕೆ ಯನ್ನು ಯುವಕರು ಸ್ಫೂರ್ತಿಯಾಗಿ ಸ್ವೀಕರಿಸುವಂತೆ ಹುರಿದುಂಬಿಸಿದರು. ಯುವ ಜನತೆ ತಮ್ಮ ಅರ್ಥಿಕ ಸ್ವಾವಲಂ ಬನೆಗೆ ಷೇರು ಮಾರುಕಟ್ಟೆಯ ಕ್ಷೇತ್ರವನ್ನು ಹವ್ಯಾಸಿ ವೃತ್ತಿಯಾಗಿ ತೆಗೆದುಕೊಳ್ಳಬಹುದು ಎಂದು ಪ್ರಚೋದಿಸಿದರು.
ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ. ಬಿ.ಕೆ. ಮಂಜುನಾಥ ಮಾತನಾಡಿದರು. ವಿದ್ಯಾರ್ಥಿನಿ ಕು. ಎಸ್. ಆಶ್ಲೇಷ ಪ್ರಾರ್ಥಿಸಿದರು, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಾಬು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯ ಶಾಸ್ತ್ರದ ಸಹ ಪ್ರಾಧ್ಯಾಪಕ ಡಾ. ದ್ರಾಕ್ಷಾಯಿಣಿ ಸ್ವಾಗತಿಸಿದರು, ವಿದ್ಯಾರ್ಥಿನಿ ಕು. ಗಾಯತ್ರಿ ಮತ್ತು ಕು. ಲತಾ ಕಾರ್ಯಕ್ರಮ ನಿರ್ವಹಿಸಿದರು, ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೆ.ಜೆ. ಯೋಗೇಶ್ ವಂದಿಸಿದರು.