ಮೊಳಕಾಲ್ಮೂರು, ಮಾ. 23 – ತಾಲ್ಲೂಕಿನ ಬೈರಾಪುರ – ಹಿರೇಕೆರೆಹಳ್ಳಿ ವಿಭೂತಿ ಗುಡ್ಡದ ಬಳಿ ನಿಧಿಗಾಗಿ ಶೋಧ ನಡೆಸುತ್ತಿದ್ದ 9 ಜನರನ್ನು ಬಂಧಿಸುವಲ್ಲಿ ಮೊಳಕಾಲ್ಮೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಬೈರಾಪುರ- ಹಿರೇಕೆರೆಹಳ್ಳಿ ಗ್ರಾಮಗಳ ಮಧ್ಯದಲ್ಲಿರುವ ವಿಭೂತಿ ಗುಡ್ಡದಲ್ಲಿ ಅಪರಿಚಿತ ವ್ಯಕ್ತಿಗಳು ಇನ್ನೋವಾ ಕಾರಿನಲ್ಲಿ ನಿಧಿ ಶೋಧನೆಗಾಗಿ ಆಯುಧಗಳನ್ನು ಇಟ್ಟುಕೊಂಡು ಅನುಮಾನಾಸ್ಪದವಾಗಿ ಗುಡ್ಡಗಳ ಬಳಿ ತಿರುಗಾಡುತ್ತಿರುವ ಮಾಹಿತಿ ತಿಳಿದ ಪೊಲೀಸರು, ಕೂಡಲೇ ಕಾರ್ಯಾಚರಣೆ ನಡೆಸಿದಾಗ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮೂಲದ ವ್ಯಕ್ತಿಗಳು ಸ್ಥಳೀಯರ ಸಂಪರ್ಕದಿಂದ ಪುರಾತನ ನಿಧಿ, ಶಾಸನ, ವಿಗ್ರಹಗಳನ್ನು ಕಳವು ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಬಂಧಿತರನ್ನು ತಿಮ್ಮರಾಜು, ರಾಮಾಂಜನಿ, ಸಣ್ಣಪ್ಪ, ಮೈಲಾರಪ್ಪ, ವೇಣು, ಕೃಷ್ಣಗಿರಿ ಮಂಜುನಾಥ, ಶ್ರೀನಿವಾಸಲು, ವೆಂಕಟೇಶ ಎಂದು ಗುರುತಿಸಲಾಗಿದೆ.
ಚಳ್ಳಕೆರೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ರಾಜಣ್ಣ ಟಿ.ಬಿ., ವೃತ್ತ ನಿರೀಕ್ಷಕ ವಸಂತ್ ವಿ. ಅಸೋದೆ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಗಳಾದ ಈರೇಶ, ಪಾಂಡುರಂಗಪ್ಪ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.