ಚಿತ್ರದುರ್ಗ, ಮಾ. 23 – ನಗರದ ಜೆ.ಸಿ.ಆರ್. ಬಡಾವಣೆ ಹತ್ತಿರ ರಾಷ್ಟ್ರೀಯ ಹೆದ್ದಾರಿ 13ರ ಸೇತುವೆ ಬಳಿ ಮಧ್ಯರಾತ್ರಿ ಬೈಕ್ ಮತ್ತು ಕೆಎಸ್‍ಆರ್‍ಟಿಸಿ ಬಸ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಪ್ರಥಮ ವರ್ಷದ ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಾದ ಯಾಸೀನ್ ಮತ್ತು ಅಲ್ತಾಫ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮತ್ತೋರ್ವ ವಿದ್ಯಾರ್ಥಿ ನೇಬಿಲ್ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಮೂವರು ವಿದ್ಯಾರ್ಥಿಗಳು ಕೇರಳದ ಕೊಲ್ಲಂ ಜಿಲ್ಲೆಯ ಅಂಜಲ್ ಗ್ರಾಮದವರಾಗಿದ್ದು, ಇಲ್ಲಿನ ಎಸ್.ಜೆ.ಎಂ. ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎಸ್ಸಿ. ನರ್ಸಿಂಗ್ ಓದುತ್ತಿದ್ದರು. ಎಸ್.ಜೆ.ಎಂ. ವಿದ್ಯಾ ಪೀಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮಿಗಳು, ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ, ಸದಸ್ಯರಾದ ಡಾ. ಪಿ.ಎಸ್. ಶಂಕರ್ ಮತ್ತು ಎಸ್.ಎನ್. ಚಂದ್ರಶೇಖರ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಸವಿತಾ ರೆಡ್ಡಿ ಅವರುಗಳು ಮೃತ ವಿದ್ಯಾರ್ಥಿಗಳಿಗೆ ಶೋಕ ವ್ಯಕ್ತಪಡಿಸಿದ್ದಾರೆ.