ಪಂಚಮಸಾಲಿ ಸಮಾಜದ ಅಕ್ಕಮಹಾದೇವಿ ಜಯಂತ್ಯೋತ್ಸವದಲ್ಲಿ ಬಿ.ಸಿ.ಉಮಾಪತಿ
ದಾವಣಗೆರೆ, ಜೂ.23- ನಗರದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಕಚೇರಿಯಲ್ಲಿ ನಡೆದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮವು ಸಮಾಜದ ಒಗ್ಗಟ್ಟಿಗೆ ಕರೆ ನೀಡುವ ವೇದಿಕೆಯಾಯಿತು. ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಬಿ.ಸಿ. ಉಮಾಪತಿ ಅವರು, ಸಮಾಜದವರು ಪರಸ್ಪರ ಪ್ರೀತಿ, ಸಹಕಾರ ಬೆಳೆಸಿಕೊಂಡು ಸಂಘಟಿತರಾಗಬೇಕೆಂದು ಕರೆ ನೀಡಿದರು.
“ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಉತ್ತರ ಕರ್ನಾಟಕದಲ್ಲಿ ಪಂಚಮಸಾಲಿ ಸಮಾಜದ ಜನರು ತೀವ್ರ ಬಡತನದಲ್ಲಿದ್ದಾರೆ. ಸರ್ಕಾರದ ಸೌಲಭ್ಯಗ ಳಿಂದ ವಂಚಿತರಾಗಿದ್ದಾರೆ” ಎಂದು ಉಮಾಪತಿ ಅವರು ವಿಷಾದಿಸಿದರು. “ವಿದ್ಯಾವಂತರೂ ಮೀಸ ಲಾತಿ ಸೌಲಭ್ಯಗಳಿಂದ ದೂರ ಉಳಿದಿದ್ದಾರೆ. ಪಂಚಮ ಸಾಲಿ ಸಮಾಜದ ಬಾಂಧವರು ಒಗ್ಗಟ್ಟಾಗಿ, ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸಹಕಾರದೊಂದಿಗೆ ಸಮಾಜ ಕಟ್ಟಬೇಕು” ಎಂದು ಅವರು ಒತ್ತಿ ಹೇಳಿದರು.
ಅಕ್ಕಮಹಾದೇವಿಯವರ ಜೀವನ ಚರಿತ್ರೆಯು ಎಲ್ಲ ಮಹಿಳೆಯರಿಗೂ ಸ್ಫೂರ್ತಿದಾಯಕವಾಗಿದೆ ಎಂದು ದಾವಣಗೆರೆ ಗ್ರಾಮಾಂತರ ಘಟಕದ ಅಧ್ಯಕ್ಷ ಜಯಣ್ಣ ಬಿಸಿಲೇರಿ ಅಭಿಪ್ರಾಯಪಟ್ಟರು. “ಅವರ ವಚನಗಳು ಇಂದಿನ ಮಹಿಳೆಯರು, ಪುರುಷರು ಮತ್ತು ಮಕ್ಕಳಿಗೆ ಮಾರ್ಗದರ್ಶನ ನೀಡುತ್ತವೆ” ಎಂದು ಪಂಚಮಸಾಲಿ ವಧು-ವರ ಮಾಹಿತಿ ಕೇಂದ್ರದ ನಿರ್ದೇಶಕ ಮಂಜುನಾಥ್ ಪುರವಂತರ್ ಹೇಳಿದರು.
ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಾ ಪಾಟೀಲ್ ಮಾತನಾಡಿ, ಮಹಿಳೆಯರಿಗೆ ಅಕ್ಕಮಹಾದೇವಿ ಯವರ ಜೀವನ ಸಂದೇಶವಾಗಬೇಕು. ಮಹಿಳಾ ದಿನಾಚರಣೆಯೊಂದಿಗೆ ಅಕ್ಕಮಹಾದೇವಿ ಜಯಂತಿಯನ್ನು ಆಚರಿಸಬೇಕು ಎಂದರು.
ಪಂಚಮಸಾಲಿ ಸಮಾಜದ ನಿಕಟಪೂರ್ವ ಅಧ್ಯಕ್ಷ ಕಿತ್ತೂರು ವೀರಣ್ಣ, ಸಮಾಜದ ಸಂಘಟನೆ ಮತ್ತು ಯಶಸ್ಸಿಗಾಗಿ ಜಿಲ್ಲಾ ಘಟಕ ಶ್ರಮಿಸುತ್ತಿದೆ. ಸಮಾಜದ ಸಣ್ಣಪುಟ್ಟ ವ್ಯತ್ಯಾಸ ಬದಿಗಿಟ್ಟು ಸಂಘಟನೆಯಾಗಬೇಕು ಎಂದರು.
ಜಗದೀಶ್ ಸ್ವಾಗತಿಸಿದರು. ಕಿತ್ತೂರು ಚನ್ನಮ್ಮ ಬಳಗದಿಂದ ಪ್ರಾರ್ಥಿಸಿದರು, ಕಾರ್ಯದರ್ಶಿ ಕಾಶೀಪುರ ವಿಶ್ವನಾಥ ನಿರೂಪಿಸಿ ವಂದಿಸಿದರು. ಬಾಡಾ ನಾಗರಾಜಪ್ಪ, ಕೈದಾಳ್ ರುದ್ರಸ್ವಾಮಿ, ಮಾಯಕೊಂಡ ರುದ್ರೇಶ್, ಅಣಜಿ ಸಂಗನಬಸಪ್ಪ, ಕಾಶೀಪುರ ಮಲ್ಲಿಕಾರ್ಜುನ, ಜಿಲ್ಲಾ ಉಪಾಧ್ಯಕ್ಷರಾದ ಎಂ. ದೊಡ್ಡಪ್ಪ ವೀಣಾ ನಟರಾಜ್ ಬೆಳ್ಳೂಡಿ, ಮೀನಾ ಪ್ರಸಾದ್ ಅಣ್ಣಾಪುರ್, ಉಮಾ ಸೋಮಶೇಖರ ಕಿಚಡಿ, ಬಣಕಾರ ನಾಗರಾಜ್ ಬಿಸಲೇರಿ ಮತ್ತಿತರರು ಇದ್ದರು.