ಮಾಯಕೊಂಡ, ಮಾ. 23 – ಸಮೀಪದ ದೊಡ್ಡ ಮಾಗಡಿಯಲ್ಲಿ ಶನಿವಾರ ನೀರಭತ್ತೇಶ್ವರ ಸ್ವಾಮಿ ಜಾತ್ರೆ ನೆರವೇರಿತು. ನೀರಿನಲ್ಲಿ ದೀಪ ಬೆಳಗುವ ಪವಾಡ ವೀಕ್ಷಿಸಲು ಸಾವಿರಾರು ಭಕ್ತರು ಸೇರಿದ್ದರು.
ಪೂಜಾರಪ್ಪನು ಗುರುವಾರ ದೇವಾಲಯ ಪ್ರವೇಶಿಸಿ, ಉಪವಾಸ ಆರಂಭಿಸುವುದರೊಂದಿಗೆ ಸಂಪ್ರದಾಯದಂತೆ ಜಾತ್ರೆಗೆ ಚಾಲನೆ ನೀಡಲಾಯಿತು.
ಮಾಯಕೊಂಡ ಆಂಜನೇಯ ಸ್ವಾಮಿ, ದಿಂಡದಹಳ್ಳಿ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಗಳನ್ನು ಉರುಮೆ, ನಗಾರಿ ವಾದ್ಯ ಸಮೇತ ಸಂಪ್ರದಾಯದಂತೆ ಆಹ್ವಾನಿಸಲಾಯಿತು. ದೊಡ್ಡ ಮಾಗಡಿ ಮತ್ತು ಮಾಯಕೊಂಡದ ದಾರಿ ಮಧ್ಯೆ ದಿಂಡದಹಳ್ಳಿ ಆಂಜನೇಯ ಸ್ವಾಮಿ, ಮಾಯಕೊಂಡದ ಆಂಜನೇಯ ಸ್ವಾಮಿ ಮತ್ತು ದೊಡ್ಡ ಮಾಗಡಿಯ ನೀರಭತ್ತೇಶ್ವರ ಸ್ವಾಮಿಯ ಅಶ್ವತೇಜ ಮೂರ್ತಿಗಳನ್ನು ಹೊತ್ತು, ಸಂಪ್ರದಾಯದಂತೆ ಭೇಟಿ ನಡೆಸಲಾಯಿತು. ಮೂರೂ ದೇವರುಗಳ ಹೊಳೆಪೂಜೆ ನಡೆಸಿ, ಮಣೇವು ಆಡಿಸಿ, ಮಡಿಯಿಂದ ಜಲ ತರಲಾಯಿತು. ಮಹಾ ಮಂಗಳಾರತಿ ಬಳಿಕ ಗಂಗಾ ಪೂಜೆ ಮಾಡಿ ತಂದ ನೀರಿನಲ್ಲಿ ಪ್ರಣತೆ ಹಚ್ಚಿಕೊಂಡು ಪೂಜಾರಪ್ಪ ದೇವಸ್ಥಾನ ಪ್ರದಕ್ಷಿಣೆ ಹಾಕಿ ಪವಾಡ ಮೆರೆದಾಗ ಭಕ್ತರ ಉತ್ಸಾಹ ಮುಗಿಲು ಮುಟ್ಟಿತು.
ಹರಕೆ ಹೊತ್ತ ಭಕ್ತರು ಉರುಳು ಸೇವೆ ಸಲ್ಲಿಸಿದರು. ನಾಸಿಕ್ ಡೋಲು ಕುಣಿತಕ್ಕೆ ಯುವಕರು ಉತ್ಸಾಹದಿಂದ ಹೆಜ್ಜೆ ಹಾಕಿ, ಪಟಾಕಿ ಸಿಡಿಸಿ, ಜಾತ್ರೆಗೆ ಮೆರಗು ತಂದರು.
ಕುಂದಾಪುರದ ಕಲಾವಿದರ ತಮ್ಮಟೆ ಪ್ರದರ್ಶನ ಜನಮನ ಸೆಳೆಯಿತು. ಗೌಡರ ಜಯಪ್ರಕಾಶ್ ಕುಟುಂಬದಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.. ದೇವಸ್ಥಾನ ಮತ್ತು ಗ್ರಾಮದ ಪ್ರಮುಖ ಬೀದಿಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ದೊಡ್ಡ ಮಾಗಡಿ, ಮಾಯಕೊಂಡ, ಅಣ್ಣಾಪುರ, ದಿಂಡದಹಳ್ಳಿ, ನರಗನಹಳ್ಳಿ, ಪರಶುರಾಂಪುರ ಸೇರಿ ಅನೇಕ ಗ್ರಾಮಗಳ ಭಕ್ತರು ಆಗಮಿಸಿದ್ದರು.
ನೀರಿನಿಂದಲೇ ದೀಪ ಬೆಳಗುವ ಐತಿಹ್ಯ: ನೀರಭತ್ತೇಶ್ವರ ಸ್ವಾಮಿಯ ಅನನ್ಯ ಭಕ್ತೆಯಾಗಿದ್ದ ಬಡ ವೃದ್ದೆಯೊಬ್ಬಳು ದೀಪ ಹಚ್ಚಲು ಎಣ್ಣೆಯಿಲ್ಲದೇ ಚಿಂತಿತಳಾಗಿ ನೀರಭತ್ತೇಶ್ವರ ಸ್ವಾಮಿಯನ್ನು ಪ್ರಾರ್ಥಿಸಿದಳು. ಆಗ ‘ನೀರಿನಿಂದಲೇ ದೀಪ ಹಚ್ಚು, ಹಣತೆ ಬೆಳಗುತ್ತದೆ’ ಎಂದು ಅಶರೀರವಾಣಿಯಾಯಿತು. ವೃದ್ಧೆ ಅಂದು, ಅಲ್ಲಿ ನೀರಿನಿಂದ ಹಣತೆ ಹಚ್ಚಿದಾಗ ದೀಪ ಬೆಳಗಿತು. ಈ ಐತಿಹ್ಯದಂತೆ ಇಂದಿಗೂ ಈ ಜಾತ್ರೆಯಲ್ಲಿ ನೀರಿನಿಂದಲೇ ದೀಪ ಬೆಳಗಿಸಲಾಗುತ್ತದೆ.