ಶಾಸಕ ಬಿ.ಪಿ ಹರೀಶ್ ಅಮಾನತ್ತು ಹರಿಹರ ತಾಲ್ಲೂಕು ಬಿಜೆಪಿ ಖಂಡನೆ
ಹರಿಹರ, ಮಾ.23 – ವಿಧಾನಸಭೆಯಲ್ಲಿ ನಿನ್ನೆ ಸಭಾಪತಿ ಯು.ಟಿ. ಖಾದರ್ ಅವರು ಬಿಜೆಪಿ ಶಾಸಕರನ್ನು ಪುಡಿ ರೌಡಿಗಳೆನ್ನುವ ರೀತಿಯಲ್ಲಿ ಹೊರಗಡೆ ಎತ್ತಿ ಹಾಕಿಸಿ ರುವ ಪ್ರವೃತ್ತಿ ಖಂಡನೀಯವಾಗಿದೆ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಹಿಂಡಸಗಟ್ಟೆ ಲಿಂಗರಾಜ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯದ ಕೆಲವು ವ್ಯಕ್ತಿಗಳ ಮೇಲೆ ಹನಿ ಟ್ರಾಪ್ ಆಗುತ್ತಿರುವ ವಿಚಾರ ಪ್ರಸ್ತಾಪ ಮಾಡಿದಾಗ, ಕಾಂಗ್ರೆಸ್ ಪಕ್ಷದ ಸಹಕಾರಿ ಸಚಿವ ಕೆ.ಎನ್. ರಾಜಣ್ಣನವರೂ ಅದನ್ನು ಒಪ್ಪಿಕೊಂಡು, ನಮ್ಮ ಮತ್ತು ನಮ್ಮ ಮಗನ ಮೇಲೆ ಹನಿಟ್ರ್ಯಾಪ್ ಆಗುತ್ತಿರುವುದು ನಿಜವಾಗಿದೆ. ಜೊತೆಗೆ ರಾಜ್ಯದಾದ್ಯಂತ ಸುಮಾರು 48 ವ್ಯಕ್ತಿಗಳ ಮೇಲೆ ನಡೆದಿದೆ ಎಂಬ ಮಾಹಿತಿ ಇರುತ್ತದೆ. ಇದಕ್ಕೆ ತನಿಖೆ ಆಗಬೇಕು ಎನ್ನುವ ಮಾತು ಹೇಳಿದ್ದಾರೆ.
ವಸ್ತುಸ್ಥಿತಿ ಹೀಗಿರುವಾಗ ಕಾಂಗ್ರೆಸ್ ಪಕ್ಷದ ದುರಾಡಳಿತ ವ್ಯವಸ್ಥೆಗಳು ಬಹಿರಂಗವಾಗುತ್ತದೆ ಎಂದು ಸಭಾಧ್ಯಕ್ಷರು ಸದನದ ದಿಕ್ಕು ತಪ್ಪಿಸುವ ಸಲುವಾಗಿ ಇಷ್ಟೆಲ್ಲಾ ರಂಪಾಟ ಮಾಡಲಿಕ್ಕೆ ಮುಂದಾಗಿ ದ್ದಾರೆ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಅಡಿಯಲ್ಲಿ ಶಾಸಕರಾದ ಬಿ.ಪಿ. ಹರೀಶ್, ತಮ್ಮ ಕ್ಷೇತ್ರದ ಅಭಿವೃದ್ದಿಗಾಗಿ ಅನುದಾನವನ್ನು ಕೇಳಿದ್ದಾರೆಯೇ ವಿನಃ ಯಾವುದೇ ರೀತಿಯ ವೈಯಕ್ತಿಕ ಕಾರಣದಿಂದ ಸದನದಲ್ಲಿ ಮಾತನಾಡಲಿಕ್ಕೆ ಅವಕಾಶವನ್ನು ಕೇಳಿರುವುದಿಲ್ಲ. ಆದರೆ ಸದನದ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ, ಜನರ ಕಷ್ಟಗಳನ್ನು ಕೇಳಿಸಿಕೊಳ್ಳಲು ವ್ಯವಧಾನವಿಲ್ಲದೆ, ಜನ ಪ್ರತಿನಿಧಿಗಳನ್ನು ಹೊರಗಡೆ ಹಾಕುವಂತಹ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಮತ್ತು ಸಭಾಧ್ಯಕ್ಷರು ಕೇವಲ ಒಂದು ಪಕ್ಷಕ್ಕೆ ಮಾತ್ರ ಸೀಮಿತವಾದ ರೀತಿಯಲ್ಲಿ ವರ್ತಿಸಿದ್ದಾರೆ. 18 ಶಾಸಕರನ್ನು ಅಮಾನತ್ತು ಮಾಡಿ, ಅಗೌರವ ತೋರುವ ಕೆಲಸವನ್ನು ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಹನುಮಂತಪ್ಪ, ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೀರೇಶ್ ಆದಾಪುರ, ದೂಡಾ ಮಾಜಿ ಸದಸ್ಯ ರಾಜು ರೋಖಡೆ, ಸುನಿಲ್, ಸಂತೋಷ ಗುಡಿಮನಿ, ವಿನಾಯಕ ಆರಾಧ್ಯಮಠ ಇತರರು ಹಾಜರಿದ್ದರು.