ಹರಿಹರದ ಕಾರ್ಯಕ್ರಮದಲ್ಲಿ ಹರಪನಹಳ್ಳಿ ಎಸ್.ಯು.ಜೆ.ಎಂ ಕಾಲೇಜಿನ ಉಪನ್ಯಾಸಕ ಹೆಚ್. ಮಲ್ಲಿಕಾರ್ಜುನ
ಹರಿಹರ, ಮಾ.20- ವಿದ್ಯಾರ್ಥಿಗಳೇ ನಿಮ್ಮ ಏಕಾಗ್ರತೆ ಮತ್ತು ಆತ್ಮವಿಶ್ವಾಸದಿಂದ ಮಾತ್ರ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಬಹುದು ಎಂದು ಹರಪನಹಳ್ಳಿ ಎಸ್.ಯು.ಜೆ.ಎಂ ಕಾಲೇಜಿನ ಉಪನ್ಯಾಸಕ ಹೆಚ್. ಮಲ್ಲಿಕಾರ್ಜುನ ಪರೀಕ್ಷಾ ತಂತ್ರಗಳನ್ನು ವಿವರಿಸಿದರು.
ತಾಲ್ಲೂಕಿನ ಬನ್ನಿಕೊಡು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಹೋಗಲಾಡಿಸಲು ಈಚೆಗೆ ಹಮ್ಮಿಕೊಂಡಿದ್ದ ಪರೀಕ್ಷಾ ಯಶಸ್ಸಿನ ತಂತ್ರಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೆಚ್ಚು ಅಂಕಗಳನ್ನು ಪಡೆಯಲು ಭಯ ಬೇಡ. ಗುರಿ, ಆತ್ಮವಿಶ್ವಾಸ, ಸಮಯ ಪಾಲನೆ, ನೆನಪಿನ ಶಕ್ತಿ ಮತ್ತು ಪರೀಕ್ಷೆಯನ್ನು ಬರೆಯುವ ತಂತ್ರ ಗಳನ್ನು ಕಲಿತರೆ ಗೆಲುವು ನಿಮ್ಮದೇ ಎಂದು ಹೇಳಿದರು.
ಬುದ್ಧಿಶಕ್ತಿ ಹೆಚ್ಚಿಸುವ ನಿರ್ದಿಷ್ಟ ಆಹಾರ, ಪಾನೀಯ, ಔಷಧಿ, ಟಾನಿಕ್ ಕೊಂಡುಕೊಳ್ಳಬೇಡಿ. ನಿದ್ದೆಗೆಟ್ಟು ಓದಬೇಡಿ, ಆಹಾರದ ವಿಷಯದಲ್ಲಿ ಉದಾಸೀನತೆ ಬೇಡ, ಪರೀಕ್ಷೆ ಬಗ್ಗೆ ಭರವಸೆ ಇರಲಿ ಭಯ ಬೇಡ ಎಂದರು.
ಪರೀಕ್ಷೆಯಲ್ಲಿ ಸೋತರೆ ಅಸಮರ್ಥರಲ್ಲ, ಅವಕಾಶಗಳು ಬಹಳ ಇವೆ. ಅದರ ಬಗ್ಗೆ ಕೀಳರಿಮೆ ಬೇಡ. ವಿದ್ಯಾರ್ಥಿಗಳು ತಮ್ಮೊಂದಿಗೆ ಸ್ಪರ್ಧಿಸಬೇಕೇ ಹೊರತು ಇತರರೊಂದಿಗೆ ಅಲ್ಲ ಎಂದು ತಿಳಿಸಿದರು.
ನಿವೃತ್ತ ಮುಖ್ಯಶಿಕ್ಷಕ ಎಸ್.ಹೆಚ್. ಹೂಗಾರ್ ಮಾತನಾಡಿ, ನಿರಂತರ ಓದುವಿಕೆ ಬಹಳ ಮುಖ್ಯ. ಸಮಾಜ, ತಂದೆ-ತಾಯಿ ಹಾಗೂ ಗುರುಗಳ ಋಣ ತೀರಿಸಲು ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಿ ಜೀವನದ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯ ವಿ.ಬಿ. ಕೊಟ್ರೇಶ್, ಹಿರಿಯ ಶಿಕ್ಷಕ ಮುಸ್ತಾಫ್ ಅಹಮದ್ ಹಾಗೂ ಶಾಲಾ ಸಿಬ್ಬಂದಿ ಹಾಜರಿದ್ದರು.