ದಾವಣಗೆರೆ, ಮಾ.20- ಓರಿಯೆಂಟಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್‌ನ (ಒಐಸಿ) ವಿಭಾಗೀಯ ಕಚೇರಿ ಯನ್ನು ದಾವಣಗೆರೆಯಲ್ಲೇ ಮರುಸ್ಥಾಪಿಸಿ ಮುಂದುವರೆಸು ವಂತೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಕೇಂದ್ರ ಸಚಿವರೊಂದಿಗೆ ಮಾತನಾಡಿರುವ ಸಂಸದರು, ದಾವಣಗೆರೆ ವಿಭಾಗೀಯ ಕಚೇರಿಗೆ ಹೋಲಿಸಿದರೆ ಚಿತ್ರದುರ್ಗ ಶಾಖಾ ಕಚೇರಿಯಲ್ಲಿ ಏಜೆಂಟ್‌ಗಳ ಸಂಖ್ಯೆ ತೀರಾ ಕಡಿಮೆಯಿದೆ. 2022-23ನೇ ಸಾಲಿನಲ್ಲಿ ಚಿತ್ರದುರ್ಗ ಶಾಖೆಯ ಕಚೇರಿ 2.92 ಕೋಟಿ ವ್ಯವಹಾರವನ್ನು ಹೊಂದಿದ್ದು, 4.55 ಕೋಟಿ ರೂ. ಕ್ಲೈಮ್‌ನೊಂದಿಗೆ 1.93 ಕೋಟಿ ನಿವ್ವಳ ನಷ್ಟವಾಗಿದೆ. ಆದರೆ ದಾವಣಗೆರೆ ವಿಭಾಗೀಯ ಕಚೇರಿಯು 3.30 ಕೋಟಿ ವ್ಯವಹಾರವನ್ನು ಹೊಂದಿದ್ದು, 2.92 ಕೋಟಿ ಕ್ಲೈಮ್‌ನೊಂದಿಗೆ ಲಾಭದಲ್ಲಿದೆ ಎಂದು ವಿವರಿಸಿದ್ದಾರೆ.
ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲಾ ಕಚೇರಿಗಳ ವಿಲೀನ ಅವಶ್ಯವಿದ್ದಲ್ಲಿ ಚಿತ್ರದುರ್ಗ ಶಾಖಾ ಕಚೇರಿಯನ್ನು ದಾವಣಗೆರೆ ವಿಭಾಗೀಯ ಕಚೇರಿಯೊಂದಿಗೆ ವಿಲೀನಗೊಳಿಸಿ. ಇಲ್ಲದಿದ್ದಲ್ಲಿ ದಾವಣಗೆರೆಯಲ್ಲಿ ಮಾತ್ರ ಒಂದೇ ಕಚೇರಿಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವರಿಗೆ ಡಾ. ಪ್ರಭಾ ಒತ್ತಾಯಿಸಿದ್ದಾರೆ.