ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಬ್ರಹ್ಮಾಕುಮಾರಿ ಜ್ಯೋತಿ
ದಾವಣಗೆರೆ, ಮಾ.20- ನಾರಿಯರು ಶಿವಶಕ್ತಿಯ ಸ್ವರೂಪವಾಗಿದ್ದು, ಒಂದು ಸ್ತ್ರೀ ನೂರು ಗುರುಗಳಿಗೆ ಸಮ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಾಮನೂರು ಶಾಖೆಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಜ್ಯೋತಿ ವಿಶ್ಲೇಶಿಸಿದರು.
ಸ್ಥಳೀಯ ಶಬರಿ ಮಹಿಳಾ ಸಂಘದ ವತಿಯಿಂದ ಜೆ.ಹೆಚ್. ಪಟೇಲ್ ಬಡಾವಣೆಯ ಹೇಮರೆಡ್ಡಿ ಮಲ್ಲಮ್ಮ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಶನಿವಾರ ಏರ್ಪಾಡಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನ ಮತ್ತು ಸಂಘದ 7ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಪವಿತ್ರ ನದಿಗಳ ಸಂಕೇತವೇ ಮಹಿಳೆ. ಸಮಾಜ ಮತ್ತು ಕುಟುಂಬಕ್ಕೆ ಶಕ್ತಿ ತುಂಬುವ ಧೈರ್ಯ ಹೆಣ್ಣು ಮಕ್ಕಳಲ್ಲಿ ಇದೆ. ಸ್ತ್ರೀಯರನ್ನು ಎಲ್ಲರೂ ಗೌರವ ಭಾವದಿಂದ ಕಾಣಬೇಕು ಎಂದು ಹೇಳಿದರು.
ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ರಾಜಯೋಗಿ ಮಾತನಾಡಿ, ಒಬ್ಬ ಸಾಮಾನ್ಯ ವ್ಯಕ್ತಿಯಿಂದ ಆಗದ ಕಾರ್ಯ, ಸಂಘ-ಸಂಘಟನೆಯಿಂದ ಆಗಲಿದೆ. ಈ ದೆಸೆಯಲ್ಲಿ ಶಬರಿ ಮಹಿಳಾ ಸಂಘದ 7 ವರ್ಷಗಳ ಪಯಣ ಶ್ಲಾಘನೀಯ ಎಂದರು.
ಸಂಘದ ಗೌರವಾಧ್ಯಕ್ಷರಾದ ಶಿವಗಂಗಾ ನಾಗರಾಜ್ ವಾರ್ಷಿಕ ವರದಿ ಮಂಡಿಸಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿರುವ ಶಾಮನೂರಿನ ಕು. ಗಾನವಿ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು. ಸಂಘದ ನಿರ್ದೇಶಕರಾದ ಶೋಭಾ ಸುರೇಶ್ ಬಾಬು ಅವರನ್ನು ಮುಂದಿನ ಕಾರ್ಯದರ್ಶಿಯಾಗಿ ನೇಮಿಸಲಾಯಿತು.
ಈ ವೇಳೆ ಸಂಘದ ಸಂಸ್ಥಾಪಕರಾದ ವಸಂತಾ ಚಂದ್ರಣ್ಣ, ಪ್ರವೀಣ ಚಂದ್ರಶೇಖರ್, ಸುಜಾತ ಮಹೇಶ್, ಲಲಿತಾ ರವಿಕುಮಾರ್, ನಿರ್ಮಲ, ಲತಾ ರವಿಕುಮಾರ್, ಸಂಘದ ಅಧ್ಯಕ್ಷರಾದ ಪುಷ್ಪಲತಾ ಅಜಯ್, ಖಜಾಂಚಿ ಕಲ್ಪನಾ ಹಿರೇಮಠ, ಶೋಭಾ, ಗೀತಾ ಇತರರು ಇದ್ದರು.