ಕನ್ನಡ ಪರ ಹೋರಾಟಗಾರ ನಾಗೇಂದ್ರ ಬಂಡೀಕರ್ ನೇತೃತ್ವದಲ್ಲಿ ಸಾಂಕೇತಿಕ ಧರಣಿ
ದಾವಣಗೆರೆ, ಮಾ.20- ಮಹಾರಾಷ್ಟ್ರ ಏಕೀಕರಣ ಸಮಿತಿಯ ಉದ್ಧಟತನ ಹತ್ತಿಕ್ಕುವಂತೆ ಸರ್ಕಾರವನ್ನು ಒತ್ತಾಯಿಸಿ ನಗರದಲ್ಲಿ ಕನ್ನಡ ಪರ ಹೋರಾಟಗಾರ ನಾಗೇಂದ್ರ ಬಂಡೀಕರ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಸಾಂಕೇತಿಕ ಧರಣಿ ನಡೆಸಿ, ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದವು.
ಇದೇ ವೇಳೆ ಕನ್ನಡ ಪರ ಸಂಘಟನೆಗಳ ಮುಖಂಡ ನಾಗೇಂದ್ರ ಬಂಡೀಕರ್ ಮಾತನಾಡಿ, ಕರ್ನಾಟಕದ ಗಡಿಗಳಲ್ಲಿ ಕನ್ನಡಿಗರ ಮೇಲಾಗುತ್ತಿರುವ ದಬ್ಬಾಳಿಕೆ, ಗಡಿನಾಡಿನಲ್ಲಿ ಸಂಚರಿಸುವ ವಾಹನಗಳು, ವಾಹನಗಳ ಚಾಲಕರು ಮತ್ತು ನಾಗರಿಕರ ಮೇಲಾಗುತ್ತಿರುವ ಹಲ್ಲೆಯಂತಹ ಅಮಾನುಷ ವರ್ತನೆಯನ್ನು ತೋರುವ ಮಹಾರಾಷ್ಟ್ರ ಏಕೀಕರಣ ಸಮಿತಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ರಾಜ್ಯದ ಎಲ್ಲಾ ಗಡಿ ಪ್ರದೇಶಗಳಲ್ಲಿ ಪದೇ ಪದೇ ತಕರಾರು ಮಾಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡಾಟದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜ್ಯದ ಎಲ್ಲಾ ಗಡಿ ಭಾಗಗಳು ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಪ್ರಗತಿ ಸಾಧಿಸಲು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು. ಗಡಿನಾಡ ಕನ್ನಡಿಗರ ಆತ್ಮ ಗೌರವ ಹಾಗೂ ಭಾಷಾಭಿಮಾನ ಕಾಪಾಡಲು ಸರ್ಕಾರ ಬದ್ಧವಾಗಬೇಕೆಂದರು.
ಅಂತರ ರಾಜ್ಯ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯವರ ಉದ್ಧಟತನದ ವರ್ತನೆ ಹಾಗೂ ಪುಂಡಾಟಿಕೆಯನ್ನು ಹತ್ತಿಕ್ಕಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜತಾಂತ್ರಿಕ ಸೌಹಾರ್ದತೆಯನ್ನು ಹಾಗೂ ಜನಜೀವನವನ್ನು ಅಸ್ತವ್ಯಸ್ತಗೊಳಿಸುವ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಕರ್ನಾಟಕದಲ್ಲಿ ರದ್ದುಗೊಳಿಸಬೇಕು. ಮಹಾರಾಷ್ಟ್ರ ಏಕೀಕರಣ ಸಮಿತಿಯು ಕರ್ನಾಟಕ ರಾಜ್ಯದಲ್ಲಿ ಯಾವುದೇ ರೀತಿಯ ಚಟುವಟಿಕೆಗಳಲ್ಲಿ ತೊಡಗಂತೆ ನಿರ್ಬಂಧಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಗಡಿ ಪ್ರದೇಶಗಳ ಅಭಿವೃದ್ಧಿಯ ಅಸಮತೋಲನ ನಿವಾರಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಬೆಳಗಾವಿ ಸೇರಿದಂತೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯತ್ತ ಸರ್ಕಾರ ಗಂಭೀರ ಚಿಂತನೆ ನಡೆಸಬೇಕೆಂದು ಒತ್ತಾಯಿಸಿದರು.
ಮಹದಾಯಿ, ಕಳಸಾ ಬಂಡೂರಿ ಹಾಗೂ ಮೇಕೆದಾಟು ಯೋಜನೆಗಳು ಅನುಷ್ಠಾನಗೊಳ್ಳಬೇಕು. ಎಲ್ಲಾ ಬೇಡಿಕೆಗಳ ಬಗ್ಗೆ ಸರ್ಕಾರ ತ್ವರಿತ ಕ್ರಮಕೈಗೊಳ್ಳುವ ಮೂಲಕ ಆಗಾಗ್ಗೆ ಎಂಇಎಸ್ ನಡೆಸುವ ದೌರ್ಜನ್ಯ ತಡೆಗಟ್ಟುವಂತಾಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಜೈ ಕರುನಾಡ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಟಿ.ಮಂಜುನಾಥಗೌಡ, ಜಿಲ್ಲಾ ಘಟಕದ ಲಿಂಗಪ್ಪ, ಲೋಕೇಶ್, ಸಾಯಿ, ಜನಪರ ಹೋರಾಟಗಾರ ಕಂಚಿಕೆರೆ ನಾಗರಾಜ್, ಕರ್ನಾಟಕ ಜನಮನ ವೇದಿಕೆಯ ಉಪಾಧ್ಯಕ್ಷ ಬಿ.ಎಸ್.ಪ್ರವೀಣ್ ಪಲ್ಲೇದ್, ಕನ್ನಡ ಪರ ಹೋರಾಟಗಾರ ರಾಜೇಂದ್ರ ಬಂಗೇರ ಮತ್ತಿತರರು ಪಾಲ್ಗೊಂಡಿದ್ದರು.