ಜಗಳೂರಿನ ಕಾರ್ಯಕ್ರಮದಲ್ಲಿ ಚಳ್ಳಕೆರೆ ಶಾಸಕ ರಘುಮೂರ್ತಿ
ಜಗಳೂರು, ಮಾ. 18 – ದಾವಣಗೆರೆ, ಚಿತ್ರದುರ್ಗ, ಜಿಲ್ಲೆಯ ಭದ್ರಾ ಮೇಲ್ದಂಡೆ ಸಮಗ್ರ ನೀರಾವರಿಗಾಗಿ ನಡೆಸುವ ಹೋರಾಟಕ್ಕೆ ಸದಾ ಬೇಂಬಲವಿದೆ ಎಂದು ಚಳ್ಳಕೆರೆ ಶಾಸಕ ರಘುಮೂರ್ತಿ ತಿಳಿಸಿದರು.
ತಾಲ್ಲೂಕಿನ ದೊಣೆಹಳ್ಳಿ ಶರಣ ಬಸವೇಶ್ವರ ದಾಸೋಹ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದಾಸೋಹ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ‘ಸಮಗ್ರ ನೀರಾವರಿಗಾಗಿ ರೈತ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ರೂ. 2611 ಕೋಟಿ ಅನುದಾನವನ್ನು ಬಜೆಟ್ ನಲ್ಲಿ ಘೋಷಿಸಿದ್ದು. ನಮ್ಮ ನಿರೀಕ್ಷೆಯಂತೆ ಅನುದಾನ ಬಿಡುಗಡೆಗೆ ಅಧಿವೇಶನದಲ್ಲಿ ಒತ್ತಾಯಿಸಲಾಗುವುದು ಎಂದರು.
ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ನಾಲ್ಕು ಜಿಲ್ಲೆಗಳನ್ನೊಳಗೊಂಡ ಭದ್ರಾ ಮೇಲ್ದಂಡೆ ಯೋಜನೆಯಡಿ 29.9 ಟಿಎಂಸಿ ನೀರು ಹಂಚಿಕೆಯಾಗಿದ್ದು, ಅದರಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ವಾಣಿವಿಲಾಸ ಸಾಗರದಿಂದ 0.25 ಟಿಎಂಸಿ ನೀರು ಹಂಚಿಕೆಗೊಳಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ಒಟ್ಟು ರೂ. 21000 ಕೋಟಿ ಅನುದಾನ ಅಗತ್ಯವಿದೆ.ಇದುವರೆಗೆ ಕೇವಲ ರೂ. 10500 ಕೋಟಿ ಅನುದಾನ ಬಿಡುಗಡೆಯಾಗಿದ್ದು. ಕೂಡ್ಲಿಗಿ ತಾಲ್ಲೂಕನ್ನು ಭದ್ರಾ ಮೇಲ್ದಂಡೆ ಯೋಜನೆಯಿಂದ ಕೈಬಿಟ್ಟಿದೆ.
ಯೋಜನೆ ಸಾಕಾರಗೊಳ್ಳಲು ಪಕ್ಷಾತೀತ ಬೆಂಬಲ, ರೈತ, ನೀರಾವರಿ ಹೋರಾಟ ಸಮಿತಿಗಳ ಹೋರಾಟ ಅನಿವಾರ್ಯ. 5 ತಾಲ್ಲೂಕುಗಳ ಸಂಗಮ ದೊಣೆಹಳ್ಳಿ ದಾಸೋಹ ಮಠದಿಂದ ಆರಂಭವಾಗುವ ಸಮಗ್ರ ನೀರಾವರಿ ಹೋರಾಟಕ್ಕೆ ಸದಾ ಸಹಮತವಿದೆ ಎಂದು ಭರವಸೆ ನೀಡಿದರು.
ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ದಾಸೋಹ ಮಠದಲ್ಲಿ ರೈತ ಸಮಾವೇಶ ಶ್ಲ್ಯಾಘನೀಯ ಈ ಭಾಗದ ಮಾಜಿ, ಹಾಲಿ ಶಾಸಕರನ್ನೊಳಗೊಂಡ ಸಮಿತಿಯೊಂದಿಗೆ ಚರ್ಚಿಸಿ ಸಮಗ್ರ ನೀರಾವರಿ ಜಾರಿಗೊಳಿಸಲು ಪಕ್ಷಾತೀತವಾಗಿ ಹೋರಾಟಕ್ಕೆ ಬದ್ದರಾಗಿದ್ದೇವೆ. ಅಧಿಕಾರ ಶಾಶ್ವತವಲ್ಲ ಅಭಿವೃದ್ದಿ ಕೆಲಸಗಳು ಶಾಶ್ವತವಾಗಬೇಕು ಎಂದು ಹೇಳಿದರು.
ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಮಾತನಾಡಿ, ಕೂಡ್ಲಿಗಿ ತಾಲ್ಲೂಕು ನೀರಾವರಿ ಕ್ಷೇತ್ರ ಮಾತ್ರವಲ್ಲದೆ, ಶಿಕ್ಷಣ, ಆರೋಗ್ಯ ಇತರೆ ಕ್ಷೇತ್ರಗಳಲ್ಲಿಯೂ ಅತ್ಯಂತ ಹಿಂದುಳಿದ ತಾಲ್ಲೂಕಾಗಿದ್ದು, ತಾಲ್ಲೂಕಿನ ರೈತರ ಅನುಕೂಲಕ್ಕಾಗಿ ಕೃಷಿ ವಿಜ್ಞಾನ ಕೇಂದ್ರ ಮಂಜೂರಾಗಿದೆ.ಅಧಿಕ ಪ್ರಮಾಣದಲ್ಲಿ ಹುಣಸೇ ಹಣ್ಣು ಬೆಳೆಯುವ ತಾಲ್ಲೂಕಿಗೆ ಗುಡೇ ಕೋಟೆ ಬಳಿ ಹುಣಸೆ ಸಂಸ್ಕರಣಾ ಘಟಕ ಸ್ಥಾಪಿಸಲಾಗುವುದು.
ನೀರಾವರಿ ಯೋಜನೆ ಸರ್ಕಾರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯತೆ ರಾಜಕಾರಣದ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ಕನಸಿನ ನೀರಾವರಿ ಯೋಜನೆ ಗಳಾದ ಭದ್ರಾ ಮೇಲ್ದಂಡೆ ಯೋಜನೆ ಕಾಮ ಗಾರಿ ತಾಂತ್ರಿಕ ದೋಷಗಳಿಂದ ಮಂದಗತಿ ಯಲ್ಲಿ ಸಾಗಿದ್ದು, ಶೀಘ್ರ ಪೂರ್ಣಗೊಳ್ಳಬೇಕಿದೆ .ನನ್ನ ಆಡಳಿತಾವಧಿಯಲ್ಲಿ ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ 57 ಕೆರೆ ತುಂಬಿಸುವ ಯೋಜನೆ ಪಕ್ಷಾತೀತ ಕಾಳಜಿಯಿಂದ ಸಾಕಾರಗೊಂಡು ಕೆರೆಗಳಿಗೆ ನೀರು ಹರಿದಿದ್ದು. ವರುಣನ ಕೃಪೆಯಿಂದ ಕೆರೆಗಳು ಕೋಡಿ ಬಿದ್ದಿವೆ. ರೈತರ ಬದುಕು ಹಸನಾಗಲಿದೆ ಎಂದರು.
ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಬರದ ನಾಡಿಗೆ ಹೆಣ್ಣು ಕೊಡಲು ಮುಂದಾಗದ ಸಂದರ್ಭಗಳು ಎದುರಾಗಿ ದ್ದವು. ಇದೀಗ ಕೆರೆಗಳಿಗೆ ನೀರು ಭರ್ತಿಯಾಗಿ ರೈತರು ಅಡಿಕೆ ಬೆಳೆಯತ್ತ ಮುಂದಾಗಿದ್ದು.ಮುಂಬರುವ ದಿನಗಳಲ್ಲಿ ಅಡಿಕೆ ಬೆಳೆಯಲ್ಲಿ ಚನ್ನಗಿರಿ ತಾಲ್ಲೂಕು ಮೀರಿಸುವ ಕಾಲ ಸನ್ನಿಹಿತವಾಗಲಿದೆ ಎಂದರು.