ಮಿಸ್ ಪಾರ್ವತಿ ಕಾರ್ಯಕ್ರಮ ; ಸಂಸದರಿಂದ ಪೋಸ್ಟರ್ ಬಿಡುಗಡೆ

ಮಿಸ್ ಪಾರ್ವತಿ ಕಾರ್ಯಕ್ರಮ ; ಸಂಸದರಿಂದ ಪೋಸ್ಟರ್ ಬಿಡುಗಡೆ

ದಾವಣಗೆರೆ, ಮಾ. 9 – ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಬಾಪೂಜಿ ಶಿಕ್ಷಣ ಸಂಸ್ಥೆಯ ಎಲ್ಲಾ ಮಹಿಳಾ ಸಿಬ್ಬಂದಿ ವರ್ಗದವರಿಗೆ ಮಿಸ್. ಪಾರ್ವತಿ ಹೆಸರಿನಲ್ಲಿ ಕಲೋತ್ಸವ ಹಾಗೂ ಕ್ರೀಡೋತ್ಸವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ದಾವಣಗೆರೆಯ ಜೆಜೆಎಂ ಕಾಲೇಜಿನ ಸಭಾಂಗಣದಲ್ಲಿ  ಕಾರ್ಯಕ್ರಮದ ಬಗ್ಗೆ ಸಂಸ್ಥೆಯ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ನಂತರ ಮಿಸ್ ಪಾರ್ವತಿ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಸಂಸದರು ಮಿಸ್.ಪಾರ್ವತಿ – ಬಾಪೂಜಿ ವಿದ್ಯಾಸಂಸ್ಥೆಯಲ್ಲಿ  ಕಾರ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳಿಗೆ ಆಯೋಜಿಸಿರುವ ಕಾರ್ಯಕ್ರಮವಾಗಿದೆ.

ಇದು ಮಹಿಳೆಯರಲ್ಲಿ ಅಡಗಿರುವ ಕಲೆಯನ್ನು ಗುರುತಿಸುವ ಪ್ರಯತ್ನವಾಗಿದೆ. ಮಹಿಳೆಯರ ಪ್ರತಿಭೆ, ಬರವಣಿಗೆ, ವಾಕ್‌ಚಾತುರ್ಯ,  ಹೊರತರಲು ಇದೊಂದು ಅದ್ಭುತವಾದ ವೇದಿಕೆ. ಹಾಗೆಯೇ ಕಲೋತ್ಸವದ ಹೆಸರಿನಲ್ಲಿ ಅಡುಗೆ, ಸಂಗೀತ, ರಂಗೋಲಿ ಹಾಕುವ ಸ್ಪರ್ಧೆಗಳು ಮತ್ತು ಕ್ರೀಡೋತ್ಸವದ ಹೆಸರಿನಲ್ಲಿ ಇಂಡೋರ್ ಮತ್ತು ಔಟ್ ಡೋರ್ ಆಟಗಳನ್ನು ಆಯೋಜಿಸಲಾಗಿದೆ ಎಂದರು. ಮಹಿಳಾ ದಿನವನ್ನು ಒಂದು ದಿನಕ್ಕೆ ಮಾತ್ರ ಮೀಸಲಿಡದೆ, ಇಡೀ ತಿಂಗಳು ಆಚರಿಸೋಣ, ಹೆಣ್ಣಾಗಿ ಹುಟ್ಟುವುದೇ ಒಂದು ಅದೃಷ್ಟ. ಅಂತಹ ಸುಂದರವಾದ ಹೆಣ್ಣುತನವನ್ನು ಸಂಭ್ರಮಿಸೋಣ. ಮನೆಯಲ್ಲಿ ದೀಪ ಬೆಳಗುವುದರ ಜೊತೆಗೆ ಮನೆಯವರ ಬದುಕನ್ನೂ ಬೆಳಗಿಸುವ ನೀವೆಲ್ಲರೂ ಈ ಸಡಗರದಲ್ಲಿ ಭಾಗಿಯಾಗಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಬಾಪೂಜಿ ಆಡಳಿತ ಮಂಡಳಿಯ ಸದಸ್ಯ ಸಂಪನ್‌ ಮುತಾಲಿಕ್, ಬಿ.ಹೆಚ್. ಅರವಿಂದ್, ಪ್ರೊ. ವೈ. ವೃಷಭೇಂದ್ರಪ್ಪ ಸೇರಿದಂತೆ ಸಂಸ್ಥೆಯ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.

error: Content is protected !!