ಅಜ್ಜಯ್ಯನಿಗೆ ರಾಜೋಪಚಾರ, ಫಳಾರ ಹಾಕಿಸುವುದಕ್ಕೆ ಚಾಲನೆ

ಅಜ್ಜಯ್ಯನಿಗೆ ರಾಜೋಪಚಾರ, ಫಳಾರ ಹಾಕಿಸುವುದಕ್ಕೆ ಚಾಲನೆ

ಮಲೇಬೆನ್ನೂರು, ಮಾ. 5- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಬುಧವಾರ ಬೆಳಿಗ್ಗೆ ಅಜ್ಜಯ್ಯನ ಗದ್ದಿಗೆ ಪೂಜೆ ನಂತರ ಭಕ್ತರು ಮತ್ತು ದೇವಸ್ಥಾನದ ಟ್ರಸ್ಟ್ ಕಮಿಟಿ ವತಿಯಿಂದ ಫಳಾರ ಹಾಕಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಫಳಾರ ಪ್ರಿಯ ಅಜ್ಜಯ್ಯನಿಗೆ ಬುಧವಾರ ಸಾಂಪ್ರದಾ ದಂತೆ ಭಕ್ತರಿಂದ ಫಳಾರ ಹಾಕಿಸಲಾಯಿತು. ಉಕ್ಕಡಗಾತ್ರಿ ಅಜ್ಜಯ್ಯನ ದರ್ಶನಕ್ಕೆ ಬಂದ ಭಕ್ತರು ತಪ್ಪದೇ ಫಳಾರವನ್ನು ಮನೆಗಳಿಗೆ ತೆಗೆದುಕೊಂಡು ಹೋಗುತ್ತಾರೆ ಮತ್ತು ಫಳಾರ ಪ್ರಸಾದವನ್ನು ನೆರೆಹೊರೆಯವರಿಗೆ ಹಂಚುವ ಪದ್ಧತಿ ನಡೆದುಕೊಂಡು ಬಂದಿದೆ.

ಫಳಾರ ಸೇವಿಸುವುದರಿಂದ ಮೈಯಲ್ಲಿನ ಕಾಯಿಲೆ, ಕಸಾಲೆಗಳು, ಭೂತ, ಪ್ರೇತಗಳು ದೂರವಾಗುತ್ತವೆ ಎಂಬ ನಂಬಿಕೆ ಭಕ್ತರದು. ಅದಕ್ಕಾಗಿಯೇ ಅಜ್ಜಯ್ಯನಿಗೆ ಪೂಜೆ ಸಲ್ಲಿಸಿ, ಫಳಾರ ಸಂಗ್ರಹಿಸಿ, ಭಕ್ತರಿಗೆ ಹಂಚುವ ಪದ್ಧತಿ ಸಾಂಪ್ರದಾಯಿಕ ಪದ್ಧತಿಯಲ್ಲಿ ನಡೆದುಕೊಂಡು ಬಂದಿದೆ.

ರಾಜೋಪಚಾರ : ಸಕಲ ವೇದ ಮಂತ್ರ ಘೋಷಣೆಗಳೊಂದಿಗೆ ಶ್ರೀ ಕರಿಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು `ಹರಹರ ಮಹಾದೇವ’, `ಕರಿಬಸವೇಶ್ವರ ಮಹಾರಾಜ್ ಕೀ’, `ಕೋಟಿಗೊಬ್ಬ ಶರಣ’, `ಪರಶಿವನಾಭರಣ’ ಎಂಬ ಬಿರುದು ಬಾವಲಿಗಳನ್ನು ಕೂಗುತ್ತಾ, ಪೀಠಾಸನದಲ್ಲಿ ಆರೋಹಣ ಮಾಡಲಾಯಿತು. 

ವೇದ, ಮಂತ್ರ, ಘೋಷಳೊಂದಿಗೆ ಶ್ರೀಗಂಧ, ಅರಿಷಿಣ, ಚಂದನ, ಮಲ್ಲಿಗೆ, ಸಂಪಿಗೆ, ಸುಗಂಧರಾಜ ಮುಂತಾದ ಮಂಗಳ ದ್ರವ್ಯಗಳಿಂದ ಮಂಗಲ ವಾದ್ಯಗಳೊಂದಿಗೆ ಸ್ವಾಮಿಗೆ ಅಲಂಕರಿಸಲಾಯಿತು. ವೇದ ಘೋಷಣೆಗಳೊಂದಿಗೆ ಛತ್ರಿ ಚಾಮರ ಸೇವೆ, ಸಂಗೀತ ಸೇವೆ, ಕಥಾಸೇವೆ, ನಾಟಕ ಸೇವೆ, ಧರ್ಮ ಗ್ರಂಥ ವಾಚನ, ನಾಟ್ಯ ಸೇವೆ, ಎಳೆ ನೀರು ಸೇವೆ, ದವಸ ಧಾನ್ಯಗಳ ಸೇವೆ, ಪಂಚ ಫಳಾರ ಸೇವೆ, ವಿವಿಧ ಪುಷ್ಪಗಳ ಅರ್ಪಣೆ, ವಿವಿಧ ಫಲಗಳ ಸೇವೆ, ಹೀಗೆ ಒಂದೊಂದು ಸೇವೆಯು ಸ್ವಾಮಿಗೆ ಮಂತ್ರ ಘೋಷಣೆಗಳೊಂದಿಗೆ ಸಮರ್ಪಿಸಲಾಯಿತು.

ಭಕ್ತರು ಅಜ್ಜಯ್ಯನ ರಾಜೋಪಚಾರ ಸೇವೆಯನ್ನು ಕಣ್ತುಂಬಿಕೊಂಡರು. ಅಜ್ಜಯ್ಯನಿಗೆ ಪ್ರಿಯವಾದ ಪಂಚ ಫಳಾರಗಳಾದ ಮಂಡಕ್ಕಿ, ಖಾರ, ಬೆಂಡು, ಬೆತ್ತಾಸು, ಮೈಸೂರು ಪಾಕ್, ಹೊಂಬಾಳೆ, ಎಳೆನೀರು, ಒಣ ಕೊಬ್ಬರಿ ಬಟ್ಟಲು, ತೆಂಗಿನಕಾಯಿ, ಉತ್ತುತ್ತಿ ಎಲ್ಲಾ ರೀತಿಯ ನೈವೇದ್ದಿತ ಧಾನ್ಯಗಳನ್ನು ಮಂತ್ರ ಘೋಷಗಳೊಂದಿಗೆ ಸಮರ್ಪಿಸುವ ಮೂಲಕ ರಾಜೋಪಚಾರವನ್ನು ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಎಸ್.ಸುರೇಶ್ ಸಮರ್ಪಿಸಿದರು.

ಪುರೋಹಿತರಾದ ದಯಾನಂದ ಶಾಸ್ತ್ರಿ, ಸಿದ್ದರಾಮಯ್ಯ, ಮನು ದೀಕ್ಷಿತ್, ನಾಗರಾಜ ಸ್ವಾಮಿ, ವೀರಯ್ಯ ಸ್ವಾಮಿ, ರಾಜೋಪಚಾರ ಪೂಜೆಯನ್ನು ನೆರವೇರಿಸಿದರು.

ಟ್ರಸ್ಟ್ ಕಮಿಟಿ ಸದಸ್ಯರಾದ ಗದಿಗೆಪ್ಪ ಹೊಸಹಳ್ಳಿ, ಬಸವನಗೌಡ ಪಾಳೇದ, ಗದಿಗೆಯ್ಯ ಪಾಟೀಲ್, ಪ್ರಕಾಶ್ ಕೋಟೇರ, ನಾಗರಾಜ್, ವಿವೇಕಾನಂದ ಪಾಟೀಲ, ಜಿಗಳೇರ ಗದಿಗೆಪ್ಪ, ವೀರನಗೌಡ ಹಲಗಪ್ಪರ, ವೀರನಗೌಡ ಬೂದೇರ ಈ ವೇಳೆ ಇದ್ದರು.

ಬೆಳ್ಳಿ ರಥೋತ್ಸವ : ನಾಳೆ ಗುರುವಾರ ಬೆಳಗ್ಗೆ ಅಜ್ಜಯ್ಯನಿಗೆ ಅಭಿಷೇಕ ಮತ್ತು ವಿಶೇಷ ಪೂಜೆ ನಂತರ ಬೆಳ್ಳಿ ರಥೋತ್ಸವ ಜರುಗಲಿದ್ದು, ರಾತ್ರಿ ಅಜ್ಜಯ್ಯನ ಪಾಲಿಕೋತ್ಸವ ವಿಜೃಂಭಣೆಯಿಂದ ನಡೆಯಲಿದೆ.

error: Content is protected !!