ಉಕ್ಕಡಗಾತ್ರಿ : ಆರೋಗ್ಯ ಮೇಳದಲ್ಲಿ ಜೆ.ಸಿ. ಮಾಧುಸ್ವಾಮಿ ಅಭಿಮತ
ಮಲೇಬೆನ್ನೂರು, ಮಾ. 4 – ಈ ಹಿಂದೆ ದಾನ, ಜ್ಞಾನ, ಶ್ರೇಷ್ಠ ಎಂಬ ಭಾವನೆಯಿತ್ತು. ಈಗ ಆರೋಗ್ಯವೂ ಅತಿ ಶ್ರೇಷ್ಠ ಎಂಬಂತಾಗಿದ್ದು, ಆರೋಗ್ಯ ಚೆನ್ನಾಗಿದ್ದರೆ ದಾನ, ಜ್ಞಾನ ಎಲ್ಲವೂ ಸಾಧ್ಯ ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ಅವರು ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ದಾವಣಗೆರೆಯ ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬಾಪೂಜಿ ಆಸ್ಪತ್ರೆ ಹಾಗೂ ಕಾಲೇಜು ಆಫ್ ಡೆಂಟಲ್ ಸೈನ್ಸ್ ಇವರ ಸಹಯೋಗದೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿದರು.
ಶ್ರೀಮಂತರು ದೊಡ್ಡ, ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಬಡವರ, ನಿರ್ಗತಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅಗತ್ಯತೆ ಇದ್ದು, ಈ ನಿಟ್ಟಿನಲ್ಲಿ ಉಚಿತ ಆರೋಗ್ಯ ಶಿಬಿರಗಳು ಕಾರ್ಯನಿರ್ವಹಿಸಬೇಕು.
ಬಡವರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿ, ಅವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಮಾಡಬೇಕು. `ಪರೋಪ’ ಕಾರಂ ಇದ್ದ ಶರೀರಂ’ ಎಂಬ ವಾಣಿಯಂತೆ ಈ ಬೃಹತ್ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿರುವುದು ಶ್ಲ್ಯಾಘನೀಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗದ್ದಿಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಎಫ್. ಸುರೇಶ್ ಮಾತನಾಡಿ, ಮನುಷ್ಯನ ಎಲ್ಲಾ ಭಾಗ್ಯಗಳನ್ನು ನೋಡಬೇಕೆಂದರೆ ಆರೋಗ್ಯ ಭಾಗ್ಯ ಬಹಳ ಮುಖ್ಯ ಎಂದರು.
ಟ್ರಸ್ಟ್ ಕಮಿಟಿ ಟ್ರಸ್ಟಿ ಜಿಗಳಿ ಇಂದೂಧರ್ ಮಾತನಾಡಿ ದರು. ಜೆಜೆಎಂ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಪುನೀತ್, ಕಾಲೇಜು ಆಫ್ ಡೆಂಟಲ್ ಸೈನ್ಸ್ ಪ್ರಾಧ್ಯಾಪಕ ಡಾ. ಪ್ರಶಾಂತ್, ಎಸ್.ಎಸ್. ಕೇರ್ ಟ್ರಸ್ಟಿನ ಹರೀಶ್, ಶ್ರೀಮತಿ ತ್ರಿವೇಣಿ ಮಾಧುಸ್ವಾಮಿ, ಗದ್ದಿಗೆ ಟ್ರಸ್ಟ್ ಕಮಿಟಿಯ ಟ್ರಸ್ಟಿ ಗದಿಗೆಯ್ಯ ಪಾಟೀಲ್, ವಕೀಲ ನಂದಿತಾವರೆ ತಿಮ್ಮನಗೌಡ ಶ್ರೀಮತಿ ಶೋಭಾ ಇಂದೂಧರ್ ವೇದಿಕೆಯಲ್ಲಿದ್ದರು.
ವಿಶೇಷ ಪೂಜೆ : ಜೆ.ಸಿ. ಮಾಧುಸ್ವಾಮಿ ಮತ್ತು ಶ್ರೀಮತಿ ತ್ರಿವೇಣಿ ದಂಪತಿ ಶ್ರೀಗುರು ಕರಿಬಸವೇಶ್ವರ ಅಜ್ಜಯ್ಯನ ಗದ್ದಿಗೆಗೆ ವಿಶೇಷ ಪೂಜೆ ಸಲ್ಲಿಸಿದರು.