ದಾವಣಗೆರೆ, ಮಾ. 4- ಜಿಲ್ಲೆಯ ಎಲ್ಲಾ ಕ್ರೀಡಾಪಟುಗಳಿಗೆ ಶಾಮನೂರು ಕುಟುಂಬದವರು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ ಎಂದು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಕಳೆದ ಮೂರು ದಿನಗಳಿಂದ ಹಮ್ಮಿಕೊಂಡಿದ್ದ ಜನಪ್ರಿಯ ಪ್ರೀಮಿಯರ್ ಲೀಗ್ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದಾವಣಗೆರೆಯಲ್ಲಿ ಎಲ್ಲಾ ಕ್ರೀಡಾಪಟುಗಳಿಗೂ ಉತ್ತೇಜನ ನೀಡುತ್ತಿರುವ ಶಾಮನೂರು ಶಿವ ಶಂಕರಪ್ಪನವರು ಮತ್ತು ಎಸ್ಎಸ್ ಮಲ್ಲಿಕಾರ್ಜುನ್ ಅವರು ಅನೇಕ ಕ್ರೀಡಾಪಟುಗಳಿಗೆ ಉದ್ಯೋಗ ನೀಡುವ ಮೂಲಕ ಪ್ರೋತ್ಸಾಹಿಸಿದ್ದರು ಎಂದರು.
ಮಲ್ಲಿಕಾರ್ಜುನ್ ಅವರು ಸಚಿವರಾಗಿದ್ದಾಗ ಕ್ರೀಡಾಪಟುಗಳಿಗೆ ಮೀಸಲಾತಿ ಕಲ್ಪಿಸುವ ಭರವಸೆ ನೀಡಿ, ಅದನ್ನು ಅನುಷ್ಠಾನಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಎಂ.ನಾಗರಾಜ್, ದೊಡ್ಡಪ್ಪ, ಪ್ರಕಾಶ್ ಗೌಡ, ಕುರುಡಿ ಗಿರೀಶ್, ಸುರಭಿ ಶಿವಮೂರ್ತಿ, ಚಂದ್ರಣ್ಣ, ಕಬಡ್ಡಿ ಮಲ್ಲಿಕಾರ್ಜುನ್, ಶ್ರೀಶೈಲ, ಚಂದ್ರು, ರಾಕಿ, ಅನಿಲ್ ಹಾಗು ಕ್ರೀಡಾ ಪ್ರೋತ್ಸಾಹಕರು ಉಪಸ್ಥಿತರಿದ್ದರು.
ಈ ಪಂದ್ಯಾವಳಿಯಲ್ಲಿ ದಾವಣಗೆರೆಯ ಹ್ಯಾಪಿ ಗ್ರೂಪ್ 27-25 ಅಂಕಗಳಿಂದ ಎನ್.ಡಿ.ಗ್ರೂಪ್ ಬೇತೂರು ರಸ್ತೆ ಇವರನ್ನು ಮಣಿಸಿ ಪ್ರಥಮ ಸ್ಥಾನವನ್ನು ಪಡೆದರೆ, ಎನ್.ಡಿ.ಗ್ರೂಪ್ ಬೇತೂರು ರಸ್ತೆ ದ್ವಿತೀಯ ಸ್ಥಾನ ಪಡೆಯಿತು. ವಿ.ಆರ್.ಎನ್ ಗ್ರೂಪ್ ತೃತೀಯ ಸ್ಥಾನ, ಸ್ಟೋನ್ ಡಿಕೆಎಸ್ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡವು.