3 ಸಾವಿರ ಉದ್ಯೋಗಗಳ ಭರ್ತಿಗೆ ಕ್ರಮ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆ, ಮಾ. 4 – ಎಸ್ಸೆಸ್ಸೆಲ್ಸಿ ಯಿಂದ ಪದವಿ, ಸ್ನಾತಕೋತ್ತರ ಪದವಿ ಸೇರಿ ದಂತೆ ಐಟಿಐ, ಡಿಪ್ಲೋಮಾ, ಇಂಜಿನಿ ಯರಿಂಗ್ ವೃತ್ತಿಪರ ಕೋರ್ಸ್‍ಗಳನ್ನು ಪಡೆದ ವರಿಗೆ ವಿವಿಧ ಕಂಪನಿಗಳಲ್ಲಿ ಅವಶ್ಯವಿರುವ 3 ಸಾವಿರ ಹುದ್ದೆಗಳ ಭರ್ತಿಗೆ ಇದೇ ದಿನಾಂಕ 15 ರಂದು ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳ ಏರ್ಪಡಿಸಿದ್ದು ಜಿಲ್ಲೆಯ ಯುವಕ, ಯುವತಿಯರು ಇದರ ಲಾಭ ಪಡೆಯ ಬೇಕೆಂದು ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಉದ್ಯೋಗ ಮೇಳದ ಪೋಸ್ಟರನ್ನು ತಮ್ಮ ಗೃಹ ಕಚೇರಿಯಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಹದಡಿ ರಸ್ತೆಯಲ್ಲಿನ ಸರ್ಕಾರಿ ಐಟಿಐ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದೆ.
ದಾವಣಗೆರೆ ನಗರ ಜವಳಿ ಕ್ಷೇತ್ರದಲ್ಲಿ ಪ್ರಸಿದ್ದಿಯನ್ನು ಪಡೆಯುವ ಮೂಲಕ ಮ್ಯಾಚೆಂಸ್ಟರ್ ಎಂದೇ ಹೆಸರು ಗಳಿಸಿತ್ತು. ಈಗ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಪಡೆದಿದೆ. ದಾವಣಗೆರೆ ಐಟಿಐನಿಂದ ಡಿಪ್ಲೋಮಾ, ಇಂಜಿನಿಯರಿಂಗ್, ಮೆಡಿಕಲ್ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಹೊಂದಿದೆ. ಜೊತೆಗೆ ಕೃಷಿಯಲ್ಲಿಯೂ ಜಿಲ್ಲೆ ಸಾಕಷ್ಟು ಅಭಿವೃದ್ದಿ ಹೊಂದಿದೆ.
ಉನ್ನತ ಶಿಕ್ಷಣ ಪಡೆದವರು ಉದ್ಯೋಗಕ್ಕಾಗಿ ಹೊರ ದೇಶಗಳಿಗೆ ಹೋಗಲಿದ್ದು, ಇಲ್ಲಿನ ಮಾನವ ಸಂಪನ್ಮೂಲ ಬೇರೆ ಕಡೆ ಬಳಕೆಯಾಗುವ ಬದಲು ಇಲ್ಲಿಯೇ ಬಳಕೆಯಾಗುವುದರಿಂದ ಇನ್ನಷ್ಟು ಅಭಿವೃದ್ದಿ ಹೊಂದಲು ಸಾಧ್ಯವಾಗಲಿದೆ. ಇಂತಹ ಬೃಹತ್ ಉದ್ಯೋಗ ಮೇಳಗಳ ಮೂಲಕ ಜಿಲ್ಲೆಯ ಯುವಕ, ಯುವತಿ ಯರಿಗೆ ಅನುಕೂಲವಾಗಲಿದೆ ಎಂದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ರೇಷ್ಮಾ ಕೌಸರ್, ಕೌಶಲ್ಯಾಭಿವೃದ್ದಿ ಅಧಿಕಾರಿ ಶಿವಕುಮಾರ್, ಜಿಲ್ಲಾ ಉದ್ಯೋಗಾಧಿಕಾರಿ ಡಿ. ರವೀಂದ್ರ, ದವನ್ ಕಾಲೇಜಿನ ಕಾರ್ಯದರ್ಶಿ ವೀರೇಶ್ ಪಟೇಲ್, ದಾವಣಗೆರೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಎನ್.ಪಿ. ಪ್ರಶಾಂತ್, ಯುವ ಕಾಂಗ್ರೆಸ್ ಮುಖಂಡ ಶ್ರೀಕಾಂತ್ ಬಗರೆ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.