ಕರ್ನಾಟಕ ರಕ್ಷಣಾ ವೇದಿಕೆಯಿಂದ ರಕ್ತಪತ್ರ ಚಳವಳಿ
ದಾವಣಗೆರೆ, ಮಾ.2- ಕರ್ನಾಟಕ ಲೋಕಸೇವಾ ಆಯೋಗವು 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ಹೊರಡಿಸಿರುವ ಅಧಿಸೂಚನೆ ರದ್ದುಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಭಾನುವಾರ ರಕ್ತಪತ್ರ ಚಳವಳಿ ನಡೆಸಿದರು.
ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ನೇತೃತ್ವದಲ್ಲಿ ಶಿವ ಹೈಟೆಕ್ ಲ್ಯಾಬ್ ಮುಂಭಾಗ ಜಮಾಯಿಸಿದ್ದ ಸಂಘಟನೆಯ ಕಾರ್ಯಕರ್ತರು, ಲ್ಯಾಬ್ ಸಿಬ್ಬಂದಿ ಸಹಾಯದಿಂದ ತಮ್ಮ ದೇಹದಿಂದ ತೆಗೆದ ರಕ್ತದಲ್ಲಿ `ಕೆಪಿಎಸ್‌ಸಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬ ನಾನಾ ಘೋಷಣೆಗಳ ಒಕ್ಕಣೆ ಬರೆದು ಪತ್ರಗಳನ್ನು ಅಂಚೆ ಇಲಾಖೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳುಹಿಸಿದರು.
ಈ ವೇಳೆ ರಾಮೇಗೌಡ ಮಾತನಾಡಿ, ಇತ್ತೀಚೆಗೆ ಕೆಪಿಎಸ್‌ಸಿ ನಡೆಸಿದ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಆಂಗ್ಲ ಭಾಷೆಯಲ್ಲಿದ್ದ ಪ್ರಶ್ನೆಗಳನ್ನು ಗೂಗಲ್ ಮೂಲಕ ಭಾಷಾಂತರ ಮಾಡಿ, ಕನ್ನಡದ ಪ್ರಶ್ನೆ ಪತ್ರಿಕೆಯಲ್ಲಿ ಅಸಂಬದ್ಧ ಪ್ರಶ್ನೆಗಳನ್ನು ಕೇಳಿದೆ. ಹೀಗಾಗಿ, ಈ ಪರೀಕ್ಷೆ ಎದುರಿಸಿದ ಸಾವಿರಾರು ಅಭ್ಯರ್ಥಿಗಳ ಬದುಕು ಮೂರಾಬಟ್ಟೆಯಾಗಿದೆ. ಆದ್ದರಿಂದ ಆ ಪರೀಕ್ಷೆಯ ಫಲಿತಾಂಶ ತಡೆ ಹಿಡಿದು ಹೊಸದಾಗಿ ಪರೀಕ್ಷೆ ನಡೆಸಬೇಕೆಂಬುದು ಕರವೇ ಒತ್ತಾಯಿಸಿತ್ತು. ಆದರೂ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಿಸಿರುವುದು ಖಂಡನೀಯ ಎಂದು ಗುಡುಗಿದರು.
ಕೆಪಿಎಸ್‌ಸಿಯಲ್ಲಿರುವ ಉತ್ತರ ಭಾರತದ ಅಧಿಕಾರಿಗಳು ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯುವುದು ಕಡ್ಡಾಯವಲ್ಲ ಎಂಬ ಅಧಿಸೂಚನೆ ಹೊರಡಿಸಿದ್ದು, ಇದು ಕನ್ನಡಿಗರ ಬದುಕು ಕಿತ್ತು ಕೊಳ್ಳುವ ಹುನ್ನಾರವೇ ಆಗಿದೆ ಎಂದು ದೂರಿದರು.
ಈಗಾಗಲೇ ಬ್ಯಾಂಕು ಮತ್ತು ರೈಲ್ವೆ ಇಲಾಖೆಗಳಲ್ಲಿ ಉತ್ತರ ಭಾರತೀಯರು ತುಂಬಿಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಪರೀಕ್ಷೆ ಕಡ್ಡಾಯವಲ್ಲ ಎನ್ನುವ ಅಧಿಕಾರಿಗಳು ಏಕೆ ಬೇಕು? ಕರ್ನಾಟಕದಲ್ಲಿಯೂ ಉತ್ತರ ಭಾರತಿಯರನ್ನು ತುಂಬುವುದಾದರೆ ಕೆಪಿಎಸ್‌ಸ್ಸಿಯನ್ನೇ ಮುಚ್ಚಿ ಬಿಡಿ ಎಂದು ಆಕ್ರೋಶ ಹೊರಹಾಕಿದರು.
ತಹಶೀಲ್ದಾರ್, ಉಪವಿಭಾಗೀಯ ಅಧಿಕಾರಿಯಾಗಲು ಕೋಟ್ಯಂತರ ರೂಪಾಯಿ ಹಣ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಣ ಕೊಟ್ಟು ಹುದ್ದೆ ಗಿಟ್ಟಿಸಿಕೊಳ್ಳುವುದಾದರೆ ಓದು ಏಕೆ ಬೇಕು? ಕೆಪಿಎಸ್‌ಸಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಮೌನ ವಹಿಸಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದರು.
384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ನಡೆದ ಪರೀಕ್ಷೆಯ ಫಲಿತಾಂಶ ತಡೆ ಹಿಡಿದು ಹೊಸದಾಗಿ ಪರೀಕ್ಷೆ ನಡೆಸಬೇಕು. ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆರಂಭಿಸಿರುವ ಪ್ರಕ್ರಿಯೆ ನಿಲ್ಲಿಸಬೇಕು. ಕೆಪಿಎಸ್‌ಸಿಯಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯುವುದು ಕಡ್ಡಾಯವಲ್ಲ ಎಂಬುದಾಗಿ ಹೊರಡಿಸಿರುವ ಅಧಿಸೂಚನೆ ಹಿಂಪಡೆಯಬೇಕು. ಕನ್ನಡ ವಿರೋಧಿ ಆದೇಶ ಹೊರಡಿಸಿರುವ ಭ್ರಷ್ಟ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಕರವೇ ಪದಾಧಿಕಾರಿಗಳಾದ ಈಶ್ವರ್, ಬಸಮ್ಮ, ನಾಗಮ್ಮ, ಮಂಜುಳಾ ಮಾಂತೇಶ್, ಗಿರೀಶ್ ಕುಮಾರ್, ಖಾದರ್ ಬಾಷಾ, ಜಬೀವುಲ್ಲಾ, ಗೋಪಾಲ್
ದೇವರಮನೆ, ತನ್ವೀರ್, ಜಿ.ಎಸ್. ಸಂತೋಷ್, ನಾಗರಾಜ್, ಮಹೇಂದ್ರ, ಆಕಾಶ್, ಮೋಹನ್ ಹಾಗೂ ಇತರರು ಇದ್ದರು.