ದಾವಣಗೆರೆ, ಮಾ.2- 2025ನೇ ಸಾಲಿನ ರಾಷ್ಟ್ರಪತಿಗಳ ಶ್ಲ್ಯಾಘನೀಯ ಸೇವಾ ಪದಕ ಪಡೆದ ಹಾಗೂ ಇತ್ತೀಚೆಗಷ್ಟೇ ಡಿವೈಎಸ್ಪಿ ಪದೋನ್ನತಿ ಪಡೆದ ಪೊಲೀಸ್ ಇನ್‌ಸ್ಪೆಕ್ಟರ್ ಹೆಚ್. ಜಯರಾಜ್ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಸಾಹಿತಿಗಳೂ, ಜಯರಾಜ್ ಅವರ ನೆಚ್ಚಿನ ಶಿಕ್ಷಕರೂ ಆದ ಎಸ್. ಓಂಕಾರಯ್ಯ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬೌದ್ಧಿಕವಾಗಿ ಶಿಷ್ಯರು ಗುರುಗಳನ್ನು ಮೀರಿಸಬೇಕು. ಈ ರೀತಿ ಗುರುವನ್ನು ಮೀರಿ ಬೆಳೆದ ಶಿಷ್ಯರನ್ನು ನೋಡಿದಾಗ ಗುರುವಿಗೆ ಹೆಮ್ಮೆಯಾಗುತ್ತದೆ ಎಂದರು.
ನನ್ನ ಅನೇಕ ಶಿಷ್ಯಂದಿರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಗುರುಗಳು ಕಂಡಾಗ ಆತ್ಮೀಯವಾಗಿ, ಗೌರವದಿಂದ ಮಾತನಾಡಿಸಿದಾಗ ಅದೇ ಶಿಷ್ಯರು ಗುರುವಿಗೆ ಕೊಡುವ ಕಾಣಿಕೆ ಇದ್ದಂತೆ ಎಂದರು.
ಪೊಲೀಸ್ ಕ್ಷೇತ್ರದಲ್ಲಿ ಜಯರಾಜ್ ಪ್ರಾಮಾಣಿಕ ಸೇವೆ ಸಲ್ಲಿಸಲಿ. ಉತ್ತಮ ಆರೋಗ್ಯ ಪದ್ಧತಿಯಿಂದ ನಿವೃತ್ತಿ ನಂತರವೂ ನೂರು ಕಾಲ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲಿ ಎಂದು ಹಾರೈಸಿದರು.
ಜಯರಾಜ್ ಅವರ ಸ್ನೇಹಿತ ಶೌಕತ್ ಅಲಿ ಕಿತ್ತೂರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಜಯರಾಜ್ ನೀರಿನಂತೆ. ನೀರು ಹೇಗೆ ಹೋದ ಕಡೆಯಲ್ಲಾ ಹೊಂದಿಕೊಳ್ಳುವುದೋ ಹಾಗೆಯೇ ಜಯರಾಜ್ ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಾರೆ. ಅವರ ಸಾಧನೆ ಸ್ನೇಹಿತ ವರ್ಗಕ್ಕೆ ಹೆಮ್ಮೆಯ ವಿಷಯ ಎಂದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹೆಚ್. ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ. ಹೆಚ್.ವಿ. ವಾಮದೇವಪ್ಪ, ನಿವೃತ್ತ ಉಪನ್ಯಾಸಕ ಪ್ರೊ.ಮಲ್ಲಿಕಾರ್ಜುನಪ್ಪ, ಉಪನ್ಯಾಸಕ ಗದಿಗೆಪ್ಪ ಪಿ., ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿದ್ರಾಮ್ ಟಿ.ಸಿ., ಬೆಂಗಳೂರು ಪೊಲೀಸ್ ನಿರೀಕ್ಷಕರುಗಳಾದ ರಾಮಪ್ಪ ಬಿ.ಗುತ್ತೇರ, ದೇವೇಂದ್ರಪ್ಪ ಕೆ.ಎಸ್., ಮೈಕ್ರೋ ಲ್ಯಾಬ್ ಲಿಮಿಟೆಡ್ ಪ್ರಾದೇಶಿಕ ವ್ಯವಸ್ಥಾಪಕ ಸಂಪತ್‌ಗೌಡ ಬಿ.ಆರ್. ಇತರರು ಉಪಸ್ಥಿತರಿದ್ದರು.