ದಾವಣಗೆರೆ ಫೆ.28- ನಗರದ ಹಿರಿಯ ಅಕ್ಕಿ ವರ್ತಕರೂ, ತರಳಬಾಳು ಬಡಾವಣೆ ಶಿವಗೋಷ್ಠಿ ಸಮಿತಿ ಅಧ್ಯಕ್ಷರೂ ಆದ ಮಾಗನೂರು ಸೋಮಶೇಖರ ಗೌಡ್ರು ಇಂದು ಬೆಳಗಿನಜಾವ 4.30 ಗಂಟೆಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು.
ಮೃತರಿಗೆ ಸುಮಾರು 88 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ, ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಸಂಜೆ ಬೆಂಗಳೂರಿನಲ್ಲಿ ನಡೆಯಿತು.
ಸೋಮಶೇಖರ ಗೌಡ್ರು, ಆರೂಢ ದಾಸೋಹಿ ಲಿಂ. ಮಾಗನೂರು ಬಸಪ್ಪ ಮತ್ತು ಲಿಂ. ಶ್ರೀಮತಿ ಸರ್ವಮಂಗಳಮ್ಮ ದಂಪತಿ ದ್ವಿತೀಯ ಪುತ್ರ ಹಾಗೂ ಶಿವ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮಾಗನೂರು ಸಂಗಮೇಶ್ವರ ಗೌಡ್ರು ಸಹೋದರರು. ಅವರು, ಚೌಕಿಪೇಟೆಯಲ್ಲಿ ಮಾಗನೂರು ಬಸಪ್ಪ ಅಂಡ್ ಸನ್ಸ್ ನಡೆಸುವುದರ ಮೂಲಕ ಹೆಸರಾಂತ ಅಕ್ಕಿ ವರ್ತಕರಾಗಿದ್ದರು.
ತಮ್ಮ ವ್ಯಾಪಾರದೊಂದಿಗೆ ಸಾಮಾಜಿಕ ಸೇವಾ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದ ಸೋಮಶೇಖರ ಗೌಡ್ರು, ಕಳೆದ 30 ವರ್ಷಗಳಿಂದ ಶಿವಗೋಷ್ಠಿ ಸಮಿತಿ ಅಧ್ಯಕ್ಷರಾಗಿ ಪ್ರತೀ ತಿಂಗಳು ಶಿವಗೋಷ್ಠಿ, ಶರಣ ಜಯಂತಿ ಸೇರಿದಂತೆ, ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವುದ ರೊಂದಿಗೆ ಸಕ್ರಿಯವಾಗಿದ್ದರು.
ಸಂತಾಪ : ಮಾಗನೂರು ಸೋಮಶೇಖರ ಗೌಡ್ರು ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗಿದ್ದ ಸೋಮಶೇಖರ ಗೌಡ್ರು, ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುತ್ತಿದ್ದರು ಎಂದು ವಾಮದೇವಪ್ಪ ಸ್ಮರಿಸಿದ್ದಾರೆ.