ಸಿಗಂದೂರು (ತುಮರಿ), ಫೆ.26- ಶರಾವತಿ ಹಿನ್ನೀರಿನಲ್ಲಿ ನಿರ್ಮಾಣ ವಾಗುತ್ತಿರುವ 2.16 ಕಿ.ಮೀ ಉದ್ದದ `ಸಿಗಂಧೂರು ಸೇತುವೆ’ ರೋಪ್ ವೇ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತ ತಲುಪಿದ್ದು, 3-4 ತಿಂಗಳಲ್ಲೇ ಲೋಕಾರ್ಪಣೆಗೊಳ್ಳಲಿದೆ ಎನ್ನಲಾಗುತ್ತಿದೆ.
464 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ದೇಶದ 2ನೇ ಅತೀ ಉದ್ದದ ಕೇಬಲ್ ಸೇತುವೆ ರೋಪ್ ವೇ ಇದಾಗಿದ್ದು, ಸೇತುವೆ ಕಾಮಗಾರಿ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ. ಕೇಬಲ್ ಜೋಡಣೆ, ಲೈಟಿಂಗ್ ಫಿನಿಷ್, ಸೇತುವೆ ಮೇಲ್ಪಪದರು ಟಾರ್ ರಸ್ತೆ ಹಾಕುವುದು ಇನ್ನಿತರೆ ಅಂತಿಮ ಹಂತದ ಕಾರ್ಯಗಳು ಮಾತ್ರ ಬಾಕಿ ಉಳಿದಿವೆ.
ಸೇತುವೆಯ ಎರಡೂ ಭಾಗದಲ್ಲಿ 3 ಕಿ.ಮೀ. ರಸ್ತೆ ವಿಸ್ತರಣೆ ಕಾಮಗಾರಿ ಆರಂಭವಾಗಿದ್ದು, ಇದೂ ಸಹ ಶೀಘ್ರ ಪೂರ್ಣಗೊಳ್ಳಲಿದೆ. 2019 ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರ್ ಅವರು ಈ ಕಾಮಗಾರಿಗೆ ಚಾಲನೆ ನೀಡಿದ್ದರು. 6 ವರ್ಷಗಳಲ್ಲಿ ಈ ಸೇತುವೆ ನಿರ್ಮಾಣಗೊಂಡಿದ್ದು, ಇದರ ಲೋಕಾರ್ಪಣೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆತರುವ ಮಾತುಗಳು ಕೇಳಿಬಂದವು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಂಸದ ಬಿ.ವೈ.ರಾಘವೇಂದ್ರ ಮತ್ತು ಶಾಸಕ ಬೇಳೂರು ಗೋಪಾಲಕೃಷ್ಣ ಇವರ ಪ್ರಯತ್ನದ ಫಲವಾಗಿ ಈ ಯೋಜನೆ ಅನುಷ್ಠಾನಗೊಂಡಿದೆ ಎನ್ನಲಾಗಿದೆ.
ಈ ಸೇತುವೆ ನಿರ್ಮಾಣದಿಂದಾಗಿ ಸಿಗಂಧೂರು ಮತ್ತು ಕೊಲ್ಲೂರು, ಮುರುಡೇಶ್ವರ ಮತ್ತಿತರೆ ಪ್ರವಾಸಿ ಸ್ಥಳಗಳಿಗೆ ನೇರ ಸಂಪರ್ಕ ಸಿಕ್ಕಿದ್ದು, ಪ್ರವಾಸಿಗರಿಗೆ ಅನುಕೂಲವಾಗಲಿದೆ.