ಕೊಟ್ಟೂರಿನಲ್ಲಿ ಸಂಭ್ರಮದ ಶಿವರಾತ್ರಿ

ಕೊಟ್ಟೂರಿನಲ್ಲಿ ಸಂಭ್ರಮದ ಶಿವರಾತ್ರಿ

ಕೊಟ್ಟೂರು, ಫೆ. 26 – ಮಹಾಶಿವರಾತ್ರಿಯ ದಿನವಾದ ಬುಧವಾರದಂದು ಕೊಟ್ಟೂರಿನ ಗದ್ದಿಕಲ್ಲೇಶ್ವರ ಈಶ್ವರ ಲಿಂಗ ಮೂರ್ತಿಗೆ ಮಹಿಳೆಯರು ಮತ್ತು ಪುರುಷರು ಪೂಜೆ ಅಭಿಷೇಕ ನೆರವೇರಿಸಿ ಭಕ್ತಿ ಸಮರ್ಪಿಸಿದರು.

ಮಹಾಶಿವರಾತ್ರಿ ಹಬ್ಬವು ಇದೀಗ ಕೊಟ್ಟೂರಿನಲ್ಲಿ ಸಾಗಿರುವ ಕೊಟ್ಟೂರೇಶ್ವರ ಜಾತ್ರೆಯ ಸಡಗರ ಸಂಭ್ರಮಕ್ಕೆ ಮತ್ತಷ್ಟು ಮೆರಗು ತಂದಿದೆ. ಕೊಟ್ಟೂರೇಶ್ವರನ ಜಪ-ತಪ, ಹಾಡುಗಳ ಮಾರ್ಧನಿ ಪಟ್ಟಣದಲ್ಲೆಡೆ ಕಳೆದ ವಾರದಿಂದ ಮೊಳಗುತ್ತಿದ್ದರೆ, ಕೊಟ್ಟೂರಿನಲ್ಲಿ ಇದರೊಟ್ಟಿಗೆ ಶಿವನಾಮ ಜಪ, ಓಂ ನಮಃ ಶಿವಾಯ ಮಂತ್ರಗಳ ಘೋಷಣೆ ಕೇಳಿ ಬಂದು ಆಸ್ತಿಕ ಭಕ್ತರ ಧಾರ್ಮಿಕ ಕೈಂಕರ್ಯಗಳಿಗೆ ಮುದ ನೀಡಿತು. 

ಮಹಾಶಿವರಾತ್ರಿ ಅಂಗವಾಗಿ ಸಾವಿರಾರು ಭಕ್ತರು ಎಂದಿನಂತೆ ಉದ್ದನೆಯ ಸಾಲಿನೊಂದಿಗೆ ಕೊಟ್ಟೂರೇಶ್ವರ ಸ್ವಾಮಿಯ ದರ್ಶನಕ್ಕೆ ಆಗಮಿಸಿ ಭಕ್ತಿ ಸಮರ್ಪಿಸವುದು ಬೆಳಗಿನಿಂದ ನಡೆಯುತ್ತಿದೆ. ಬೆಳಗಿನ ಜಾವ  ಶ್ರೀ ಕೊಟ್ಟೂರೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕದೊಂದಿಗೆ ಶಿವರಾತ್ರಿ ಆಚರಣೆಗೊಂಡಿತು. ಶ್ರೀ ಸ್ವಾಮಿಯ ಮೂರು ಪ್ರಮುಖ ಮಠಗಳಾದ ಹಿರೇಮಠ, ತೊಟ್ಟಿಲು ಮಠ, ಗಚ್ಚಿನಮಠಗಳಿಗೆ ದಂಡು ದಂಡಾಗಿ ಭಕ್ತರು ತೆರಳಿ ಪೂಜೆ ಸಲ್ಲಿಸಿದರು. 

ಇಲ್ಲಿನ ಈಶ್ವರ ದೇವಸ್ಥಾನಗಳಾಗಿರುವ ಗದ್ದಿಕಲ್ಲೇಶ್ವರ, ಮಳೆಮಲ್ಲೇಶ್ವರ, ಸಿರಿಮಠಲಿಂಗೇಶ್ವರ, ಚಂದ್ರಮೌಳೇಶ್ವರ, ಮಾರ್ಕಂಡೇಶ್ವರ, 108 ಶಿವಲಿಂಗಗಳ ದೇವಸ್ಥಾನ, ಸೋಮಲಿಂಗೇಶ್ವರ, ರಾಮಲಿಂಗೇಶ್ವರ, ಹ್ಯಾಳ್ಯಾದ ಬಳಿಯ ಪಂಪಾಪತಿ ಪತೇಶ್ವರ, ಅಂಬಳಿಯ ಕಲ್ಲೇಶ್ವರ, ಗುಡಿಗಳಿಗೆ ಭಕ್ತರು ಬೆಳಗ್ಗಿನಿಂದಲೇ ತೆರಳಿ ನಿರಂತರ ರುದ್ರಾಭಿಷೇಕ ಮತ್ತು ವಿಶೇಷ ಪೂಜೆಗಳನ್ನು ಕುಟುಂಬ ಸಮೇತರಾಗಿ ಮಾಡಿ ಸೇವೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಪಟ್ಟಣದ ಗದ್ದಿ ಕಲ್ಲೇಶ್ವರ ದೇವಸ್ಥಾನದ ಈಶ್ವರ ಲಿಂಗಮೂರ್ತಿಗೆ ಬುಧವಾರ ರಾತ್ರಿಯುದ್ದಕ್ಕೂ ಮಹಾರುದ್ರಾಭಿಷೇಕ ಕೈಂಕರ್ಯ ನಿರಂತರ ಸಾಗಿದೆ.

error: Content is protected !!