ಹಠ ಹಿಡಿದು 5 ಸಾವಿರ ಕೋಟಿ ತರಲಿ

ಹಠ ಹಿಡಿದು 5 ಸಾವಿರ ಕೋಟಿ ತರಲಿ

ಚಿತ್ರದುರ್ಗ : ಭದ್ರಾ ಮೇಲ್ದಂಡೆ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಮುಖಂಡರ ಹಕ್ಕೊತ್ತಾಯ

ಚಿತ್ರದುರ್ಗ, ಫೆ.25- ಭದ್ರಾ ಮೇಲ್ದಂಡೆ ಕಾಮಗಾರಿ ಅರ್ಧಕ್ಕೆ ನಿಂತಿರುವ ಕಾರಣ ಕಾಲುವೆಗಳು ಬಿಸಿಲಿಗೆ ಬಾಯ್ತೆರೆದು ನಿಂತಿವೆ. ಶೀಘ್ರ ನೀರು ತುಂಬದಿದ್ದರೆ ಕಾಮಗಾರಿ ನಾಶವಾಗುವ ಅಪಾಯವಿದೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಮುಂದಿನ ರಾಜ್ಯ ಬಜೆಟ್‌ನಲ್ಲಿ ಕಾಮಗಾರಿಗೆ ಕನಿಷ್ಠ 5,000 ಕೋಟಿ ಮೀಸಲಿಡುವಂತೆ ನೋಡಿಕೊಳ್ಳಬೇಕು ಎಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ರಾಜ್ಯ ಸರ್ಕಾರದ ಮುಂದೆ ಸೋಮವಾರ ಹಕ್ಕೊತ್ತಾಯ ಮಂಡಿಸಿತು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸಭೆಯಲ್ಲಿ ಸಚಿವರು, ಶಾಸಕರಿಗೆ ಹಕ್ಕೊತ್ತಾಯ ಪತ್ರ ನೀಡಿದ ಅವರು, ಬೇಸಿಗೆ ಸಮೀಪಿಸುತ್ತಿದ್ದು ಭದ್ರಾ ಕಾಲುವೆಗಳು ದೀರ್ಘ ಕಾಲದವರೆಗೆ ಗುಣಮಟ್ಟ ಕಾಯ್ದುಕೊಳ್ಳಲಿವೆ ಎಂಬ ಗ್ಯಾರಂಟಿ ಇಲ್ಲ. ಯೋಜನೆ ಆರಂಭಿಸಿದಾಗ ಇದ್ದ ಉತ್ಸಾಹ ಈಗ ಉಳಿದಿಲ್ಲ. ಉತ್ಸಾಹ ಮುಂದುವರೆದಿದ್ದರೆ ಇಷ್ಟೊತ್ತಿಗೆ ಕಾಮಗಾರಿ ಪೂರ್ಣಗೊಂಡು ಬಯಲು ಸೀಮೆ ರೈತರಿಗೆ ನೀರು ದೊರೆಯಬೇಕಾಗಿತ್ತು. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯಿಂದ ಮಹತ್ವಾಕಾಂಕ್ಷಿ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ಮುಖಂಡರು ಆರೋಪಿಸಿದರು.

ಕೇಂದ್ರ ಸರ್ಕಾರ 2022–23ರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ 5,300 ಕೋಟಿ ಹಣದಲ್ಲಿ ಇಲ್ಲಿಯವರೆಗೆ ಒಂದು ಪೈಸೆಯೂ ಬಂದಿಲ್ಲ. ಕೇಂದ್ರದ ಅನುದಾನ ನಂಬಿಕೊಂಡು ರಾಜ್ಯ ಸರ್ಕಾರ ತನ್ನ ಪಾಲಿನ ಜವಾಬ್ದಾರಿ ಮರೆಯಬಾರದು. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಸ್ವಾಭಿಮಾನವನ್ನು ಮೆರೆಯಬೇಕು, ಬದ್ಧತೆ ತೋರಿಸಬೇಕು. ಕೇಂದ್ರ ಸರ್ಕಾರ ಅನುದಾನ ಕೊಡುತ್ತದೆ ಎಂಬ ಕಾರಣಕ್ಕೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ತಂದಿಲ್ಲ ಎಂಬುದನ್ನು ರಾಜ್ಯ ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದರು.

ಭದ್ರಾ ನೀರು ನಮ್ಮ ಜಿಲ್ಲೆಯ ರೈತರಿಗೆ ಸಿಕ್ಕಿದ್ದರೆ ಅವರ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗುತ್ತಿತ್ತು. ಸರ್ಕಾರಗಳ ಇಚ್ಚಾಶಕ್ತಿ ಕೊರತೆಯ ಕಾರಣಕ್ಕೆ ಕಾಮಗಾರಿ ಸಾಕಾರಗೊಂಡಿಲ್ಲ. ಯೋಜನೆ ಘೋಷಣೆಯಾದಾಗ 21 ಸಾವಿರ ಕೋಟಿ ಖರ್ಚು ಕಾಮಗಾರಿಗೆ ತಗುಲುತ್ತಿತ್ತು. ಆದರೆ ಈಗ ದರಪಟ್ಟಿ ಪರಿಷ್ಕೃತವಾದಲ್ಲಿ ಯೋಜನಾ ವೆಚ್ಚ ದ್ವಿಗುಣವಾಗುವ ಸಾಧ್ಯತೆ ಇದೆ ಎಂದರು.

ಜಲಶಕ್ತಿ ರಾಜ್ಯ ಸಚಿವ, ನಮ್ಮವರೇ ಆದ ವಿ.ಸೋಮಣ್ಣ ಅವರಿಗೂ ಸಮಿತಿ ವತಿಯಿಂದ ಈಗಾಗಲೇ ಮನವಿ ಮಾಡಲಾಗಿತ್ತು. ಕಳೆದ ಗಾಂಧಿ ಜಯಂತಿಯಂದು ಚಿತ್ರದುರ್ಗಕ್ಕೆ ಬಂದಿದ್ದ ಸಚಿವ ವಿ.ಸೋಮಣ್ಣ ಅವರು 45 ದಿನದ ಒಳಗಾಗಿ ಮೊದಲ ಕಂತು ಬಿಡುಗಡೆ ಮಾಡಿಸುವುದಾಗಿ ಹೇಳಿ ಹೋದವರು ಮತ್ತೆ ಹಿಂತಿರುಗಿ ನೋಡಿಲ್ಲ. ಅವರು ತಮ್ಮ ಮಾತು ಉಳಿಸಿಕೊಳ್ಳಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಪದೇ ಪದೇ ವಂಚನೆ, ದ್ರೋಹಕ್ಕೆ ಒಳಗಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಟಿ.ರಘುಮೂರ್ತಿ ಮಾತನಾಡಿ ‘ಭದ್ರಾ ಮೇಲ್ದಂಡೆ ಕಾಮಗಾರಿ  ಇನ್ನೆರಡು ವರ್ಷದ ಒಳಗೆ ಪೂರ್ಣಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯ ಸರ್ಕಾರ ಅನುದಾನ ಬಿಡುಗಡೆ ವಿಚಾರದಲ್ಲಿ ತನ್ನ ಬದ್ದತೆ ಪ್ರದರ್ಶಿಸಲಿದೆ. ಅದೇ ರೀತಿ ಕೇಂದ್ರ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ’ ಎಂದರು.

ಶಾಸಕ ಕೆ.ಸಿ.ವೀರೇಂದ್ರ ಮಾತನಾಡಿ, ಈ ಭಾಗದ ರೈತರಿಗೆ ಭದ್ರಾ ಮೇಲ್ದಂಡೆ ಯೋಜನೆ ಅವಶ್ಯಕವಾಗಿದ್ದು ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳ್ಳಬೇಕು. ಈ ವೇಳೆಗಾಗಲೇ ಯೋಜನೆ ಸಾಕಾರಗೊಳ್ಳಬೇಕಾಗಿತ್ತು. ಕೇಂದ್ರ ಸರ್ಕಾರ ಕೂಡ ತನ್ನ ಪಾಲಿನ ಹಣ ನೀಡಲು ನಿರ್ಲಕ್ಷ್ಯ ವಹಿಸಿದೆ ಎಂದರು.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಮುಖಂಡರಾದ ಜೆ. ಯಾದವ ರೆಡ್ಡಿ, ಸಂಗೇನಹಳ್ಳಿ ಅಶೋಕ್ ಕುಮಾರ್, ಲಕ್ಷ್ಮಣ ರೆಡ್ಡಿ, ಅನಂತರೆಡ್ಡಿ, ಸುರೇಶ್ ಬಾಬು, ಬಸವರಾಜಪ್ಪ, ಕೆ.ಪಿ.ಭೂತಯ್ಯ,ಕೆ.ಸಿ.ಹೊರಕೇರಪ್ಪ, ಹಂಪಯ್ಯನಮಾಳಿಗೆ ಧನಂಜಯ, ಬಸ್ತಿಹಳ್ಳಿ ಸುರೇಶ್ ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ಷಣ್ಮುಖ ಇದ್ದರು.

error: Content is protected !!