ಜಿಲ್ಲಾ ರೆಡ್ ಕ್ರಾಸ್ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಆಶಯ
ದಾವಣಗೆರೆ, ಫೆ. 24- ದಾವಣಗೆರೆ ವಾಣಿಜ್ಯ ನಗರವಾಗಿದೆ. ದಾನಿಗಳೂ ಸಹಾ ಇದ್ದಾರೆ. ಇಲ್ಲಿ ಕೂಡಾ ಸಾಕಷ್ಟು ಬಡವರು, ಅಸಹಾಯಕರು, ನೆರವು ಕೇಳುವಂತಹ ಜನರು ಇದ್ದಾರೆ. ಅವರನ್ನು ದೃಷ್ಠಿಯಲ್ಲಿಟ್ಟುಕೊಂಡು ನಾವು ರೆಡ್ಕ್ರಾಸ್ ಸಂಸ್ಥೆಯಿಂದ ಮುಂದೆ ಯಾವ ರೀತಿಯ ಕಾರ್ಯ ಯೋಜನೆ ರೂಪಿಸಿಕೊಳ್ಳಬೇಕು. ಈ ಜಿಲ್ಲೆಗೆ ಒಳ್ಳೆಯದಾಗುವಂತಹ ಕೆಲಸವನ್ನು ಮಾಡಬೇಕೆನ್ನುವುದರ ಬಗ್ಗೆ ನಾವು, ನೀವು ಚಿಂತನೆ ಮಾಡುವುದು ತುಂಬಾ ಅಗತ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಹೇಳಿದರು.
ನಗರದ ಎಂಸಿಸಿ ಬಿ ಬ್ಲಾಕ್ನಲ್ಲಿರುವ ಐಎಂಎ ಸಭಾಂಗಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸೇವಾ ಕಾರ್ಯಗಳ ಮೂಲಕ ಇಡೀ ದೇಶವಲ್ಲದೇ, ರಾಷ್ಟ್ರದಾದ್ಯಂತ ಉತ್ತಮ ಹೆಸರು ಗಳಿಸಿದೆ. ರೆಡ್ ಕ್ರಾಸ್ ಸಂಸ್ಥೆ ಜಾಗತಿಕ ಮಹಾಯುದ್ಧಗಳು ನಡೆದ ಸಂದರ್ಭದಲ್ಲಿ ನಿರಾಶ್ರಿತರಾದವರು, ಅಸಹಾಯ ಕರಿಗೆ ನೆರವು ನೀಡುವ ಉದ್ದೇಶದಿಂದ ಹೆನ್ರಿ ಡ್ಯುನಾಂಟ್ ಸ್ಥಾಪಿಸಿದ ಸಂಸ್ಥೆ ಇದಾಗಿದೆ. ನಮ್ಮಿಂದ ಈ ಸಮಾಜಕ್ಕೆ ಎಷ್ಟು ಸಾಧ್ಯವೋ ಅಷ್ಟು ಸೇವೆ ಸಲ್ಲಿಸುವುದು ಈ ಸಂಸ್ಥೆ ಸದಸ್ಯರ ಉದ್ದೇಶವಾಗಿದೆ. ಯಾವ ಧ್ಯೇಯೋದ್ಧೇಶಗಳನ್ನು ಇಟ್ಟುಕೊಂಡು ಈ ಸಂಸ್ಥೆಯನ್ನು ಕಟ್ಟಲಾಗಿದೆಯೋ, ಆ ನಿಟ್ಟಿನಲ್ಲಿ ಎಲ್ಲರ ಭಾವನೆಗಳಿಗೆ ಗೌರವ ನೀಡಿ, ಎಲ್ಲರೂ ಸೇರಿ ಒಂದು ಇತ್ಯರ್ಥಕ್ಕೆ ಬಂದು, ಎಲ್ಲರೂ ಒಮ್ಮನಸ್ಸಿನಿಂದ ಮುಂದುವರೆಸಿಕೊಂಡು ಹೋಗೋಣ ಎಂದು ಆಶಿಸಿದರು.
ರೆಡ್ಕ್ರಾಸ್ ಸಂಸ್ಥೆ ಹಿರಿಯ ಸದಸ್ಯ, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಇಡೀ ದೇಶದಲ್ಲಿ ಒಂದು ಒಳ್ಳೆಯ ಕೆಲಸ ಆಗುತ್ತೆ ಎಂದರೆ ಅದು ರೆಡ್ ಕ್ರಾಸ್ ನಿಂದ ಎಂದು ತಿಳಿದಿದ್ದಾರೆ. ನಾನೂ ಕೂಡಾ ಲಿಯೋ ಸಂಸ್ಥೆಯಲ್ಲಿ ಒಂದು ಟೀಂ ಮಾಡಿಕೊಂಡು ರಕ್ತದಾನ ಇರಬಹುದು ಇತರೆ ಸೇವಾ ಕಾರ್ಯಗಳಿಗೆ ಎಲ್ಲರೂ ಕೈ ಜೋಡಿಸಿ ಸೇವೆ ಮಾಡಿಕೊಂಡು ಬಂದಿದ್ದೇವೆ. ನಾನೂ ಸಹಾ 62 ಬಾರಿ ರಕ್ತದಾನ ಮಾಡಿದ್ದೇನೆ. ರಕ್ತದಾನದ ಬಗ್ಗೆ ಜಾಗೃತಿ ಇರಬಹುದು, ಇತರೆ ಆರೋಗ್ಯಕರ ಸೇವಾ ಕಾರ್ಯಗಳನ್ನು ಬಡವರಿಗೆ, ಸಾರ್ವಜನಿಕರಿಗೆ ರೆಡ್ಕ್ರಾಸ್ ಸಂಸ್ಥೆ ಮಾಡುತ್ತಾ ಬಂದಿದೆ. ಒಳ್ಳೆಯ ಕೆಲಸಗಳನ್ನು ಮಾಡಿದಾಗ ಕೇಂದ್ರ ರೆಡ್ಕ್ರಾಸ್ ಶಾಖೆ, ಸ್ಮಾರ್ಟ್ ಸಿಟಿ, ಪಾಲಿಕೆ, ಜೊತೆಗೆ ನಮ್ಮ ದೂಡಾದಿಂದ ನಾವು ಸಹಕಾರ ನೀಡಲು ಮುಂದೆ ಬರುತ್ತಾರೆ. ಅದನ್ನು ಉಳಿಸಿಕೊಂಡು ಹೋಗುವಂತಹ ಕೆಲಸ ನಿಮ್ಮಿಂದ ಆಗಬೇಕು ಎಂದು ಹೇಳಿದರು.
ಸಂಸ್ಥೆ ಸಭಾಪತಿ ಡಾ.ಎ.ಎಂ. ಶಿವಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ಇಲ್ಲಿಯವರೆಗೆ ರೆಡ್ ಕ್ರಾಸ್ ಸಂಸ್ಥೆ ರಕ್ತದಾನ, ರಕ್ತದಾನ ಕುರಿತು ಅರಿವು, ರಕ್ತದ ಗುಂಪು ತಪಾಸಣೆ, ಪ್ರಥಮ ಚಿಕಿತ್ಸೆ, ಆರೋಗ್ಯ ಶಿಬಿರ, ಕೋವಿಡ್ ಸಂದರ್ಭದಲ್ಲಿ ಮಾಸ್ಕ್ ವಿತರಣೆ, ಆಹಾರ, ದಿನಸಿ ಕಿಟ್ ವಿತರಣೆ, ಆಹಾರ ಪ್ಯಾಕೇಟ್ ವಿತರಣೆ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ನಮ್ಮ ಸಂಸ್ಥೆಯ ಚಟುವಟಿಕೆಗಳನ್ನು ನೋಡಿ ಸ್ಮಾರ್ಟ್ ಸಿಟಿಯಿಂದ ನಮ್ಮ ರಕ್ತನಿಧಿ ಕೇಂದ್ರಕ್ಕೆ ಹೊಸ ತಂತ್ರಜ್ಞಾನದ ಯಂತ್ರಗಳನ್ನು ನೀಡಲಾಗಿದೆ. ನಮ್ಮ ಸಂಸ್ಥೆಯಿಂದ ರಕ್ತವನ್ನು ರಿಯಾಯಿತಿ ದರದಲ್ಲಿ, ಕೆಲವರಿಗೆ ಉಚಿತವಾಗಿ ನೀಡುತ್ತಾ ಬಂದಿದ್ದೇವೆ. ಹಲವಾರು ಸಂಘ-ಸಂಸ್ಥೆ, ಹಳೆ ವಿದ್ಯಾರ್ಥಿಗಳ ಸಂಘದವರು ಆಂಬ್ಯುಲೆನ್ಸ್ ವ್ಯಾನ್, ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ನೀಡಿದ್ದಾರೆ. ಜನರ ಸೇವೆಗೆ ರೆಡ್ ಕ್ರಾಸ್ ಸಂಸ್ಥೆ ಸದಾ ಇರುತ್ತದೆ ಎಂದು ತಿಳಿಸಿದರು.
ಪಾಲಿಕೆ ಮೇಯರ್ ಕೆ.ಚಮನ್ಸಾಬ್, ಜಿಪಂ ಯೋಜನಾ ನಿರ್ದೇಶಕರಾದ ರೇಷ್ಮಾ ಕೌಸರ್, ರೆಡ್ಕ್ರಾಸ್ ಸಂಸ್ಥೆಯ ಹಿರಿಯ ಸದಸ್ಯೆ ಕಿರುವಾಡಿ ಗಿರಿಜಮ್ಮ, ರಾಜ್ಯ ಸಮಿತಿ ಸದಸ್ಯ ಶಕೀಂ, ಕಾರ್ಯದರ್ಶಿ ಆನಂದ ಜ್ಯೋತಿ, ಖಜಾಂಚಿ ಅನಿಲ್ ಬಾರೆಂಗಳ್ ಮತ್ತು ಇತರರು ಉಪಸ್ಥಿತರಿದ್ದರು.