ಕೆ.ಟಿ.ಜೆ. ನಗರದ ಕುವೆಂಪು ಕನ್ನಡ ಯುವಕರ ಸಂಘದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಹಿಂದು ಜಾಗರಣಾ ವೇದಿಕೆಯ ಯುವ ಮುಖಂಡ ಸತೀಶ್ ಪೂಜಾರಿ ಕರೆ
ದಾವಣಗೆರೆ, ಫೆ. 23 – ಛತ್ರಪತಿ ಶಿವಾಜಿ ಮಹಾರಾಜರು, ಛತ್ರಪತಿ ಸಾಂಬಾಜಿ ಮಹಾರಾಜರ ನೈಜ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಮೂಲಕ ಇಂತಹ ಮಹಾನ್ ದೇಶಪ್ರೇಮಿಗಳು, ಹೋರಾಟಗಾರರ ಕೆಚ್ಚನ್ನು ಮಕ್ಕಳಲ್ಲಿ ಮೂಡಿಸಬೇಕು ಎಂದು ಹಿಂದು ಜಾಗರಣಾ ವೇದಿಕೆಯ ಯುವ ಮುಖಂಡ ಸತೀಶ್ ಪೂಜಾರಿ ಕರೆ ನೀಡಿದರು.
ಇಲ್ಲಿನ ಕೆ.ಟಿ.ಜೆ. ನಗರ 12ನೇ ಕ್ರಾಸ್‌ನ ಹಳೆ ಜಿಲ್ಲಾ ಖಜಾನೆ ಪಕ್ಕ ಕುವೆಂಪು ಕನ್ನಡ ಯುವಕರ ಸಂಘ ನಿನ್ನೆ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತ್ಯೋತ್ಸವದ ಅಂಗವಾಗಿ ರಕ್ತದಾನ ಶಿಬಿರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಹಿಂದೂ ಧರ್ಮದ ರಕ್ಷಣೆ, ಹಿಂದೂಗಳು, ಗೋವುಗಳು, ಹಿಂದುತ್ವದ ರಕ್ಷಣೆಗಾಗಿ ಸಮಸ್ತ ಹಿಂದೂ ಸಮಾಜವನ್ನು ಒಗ್ಗೂಡಿಸಿದ ಶ್ರೇಯಸ್ಸು ಛತ್ರಪತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ ಎಂದು ಹೇಳಿದರು.
ಇಡೀ ವಿಶ್ವವೇ ಮೆಚ್ಚುವಂತಹ ಅಪ್ರತಿಮ ಹೋರಾಟಗಾರರಾದ ಶಿವಾಜಿ ಮತ್ತು ಸಾಂಬಾಜಿ ಮಹಾರಾಜರ ಕೊಡುಗೆ, ತ್ಯಾಗ, ಬಲಿದಾನವನ್ನು ನಾವ್ಯಾರೂ ಮರೆಯಬಾರದು. ವಿದೇಶೀಯರು ಸಹ ಛತ್ರಪತಿ ಶಿವಾಜಿ ಮಹಾರಾಜರನ್ನು ಸ್ಫೂರ್ತಿಯಾಗಿ ಸ್ವೀಕರಿಸಿದ್ದಾರೆ. ಚಾಣಾಕ್ಷಮತಿ ಯಾಗಿದ್ದ ಶಿವಾಜಿ ಮಹಾರಾಜರು ತಮ್ಮ ತಾಯಿಯಿಂದ ದೇಶಾಭಿಮಾನಿ, ಧರ್ಮನಿಷ್ಟೆಯನ್ನು ಮೈಗೂಡಿಸಿಕೊಂಡವರು. ಪರಸ್ತ್ರೀಯರನ್ನು ತಾಯಿಯಂತೆ ಗೌರವಿಸುತ್ತಿದ್ದವರು, ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರು ಎಂದು ಅವರು ತಿಳಿಸಿದರು.
ಒಂದು ಕಡೆ ಮೊಘಲ್ ದೊರೆ ಔರಂಗಜೇಬ, ಮತ್ತೊಂದು ಕಡೆ ವಿಜಯಪುರದ ಆದಿಲ್ ಶಾಹಿ ವಂಶ ಹೀಗೆ ಜೀವನದುದ್ದಕ್ಕೂ ಶತ್ರುಗಳ ವಿರುದ್ಧ ಹೋರಾಡುವುದರಲ್ಲೇ ಜೀವನ ಕಳೆದವರು ಛತ್ರಪತಿ ಶಿವಾಜಿ ಮಹಾರಾಜರು. ತಂದೆಯ ಹೋರಾಟ, ಕಿಚ್ಚು, ಚಾಣಾಕ್ಷತವನ್ನು ಬಾಲ್ಯದಿಂದಲೂ ನೋಡಿಕೊಂಡೇ ಬೆಳೆದ ಛತ್ರಪತಿ ಹಿರಿಯ ಪುತ್ರ ಸಾಂಬಾಜಿ ಮಹಾರಾಜ್ ಸಹ ಮೊಗಲ್ ದೊರೆ ಔರಂಗಜೇಬ್‌ಗೆ ಸಿಂಹಸ್ವಪ್ನವಾಗಿದ್ದವರು. ಕಡೆಗೆ ಔರಂಗಜೇಬನ ಮತಾಂತರದ ಆಮಿಷ ತಿರಸ್ಕರಿಸಿ, ಸುಮಾರು 40 ದಿನ ಮೊಘಲರ ದೊರೆಯ ವಿಕೃತತೆ, ಪೈಶಾಚಿಕ ವರ್ತನೆಯಿಂದ ತೀವ್ರ ನೋವುಂಡರೂ ಧರ್ಮ ಬಿಡದ ಸಿಂಹದ ಮರಿ ಸಾಂಬಾಜಿ ಮಹಾರಾಜರು ಎಂದು ಅವರು ಹೇಳಿದರು.
ಛತ್ರಪತಿ ಕುಟುಂಬಕ್ಕೆ, ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಶಿವಾಜಿಯವರ ತಂದೆ ಷಹಾಜಿ ರಾಜೇಯವರ ಸಮಾಧಿ ನಮ್ಮದೇ ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲ್ಲೂಕು ಹೊದಿಗೆರೆ ಗ್ರಾಮದಲ್ಲಿದೆ. ಮಹಾರಾಷ್ಟ್ರದ ಮನೆ ಮಾತಾದ ಶಿವಾಜಿ-ಸಾಂಬಾಜಿ ಮಹಾರಾಜರ ಹಿರಿಯರ ಸಮಾಧಿ ನಮ್ಮ ಜಿಲ್ಲೆಯಲ್ಲಿರುವುದು ಅಭಿಮಾನದ ಸಂಗತಿ ಯಾಗಿದೆ. ಇಂತಹ ಮಹಾನ್ ಕೆಚ್ಚದೆಯ ಹಿಂದು ಸ್ವರಾಜ್ಯ ಸ್ಥಾಪಕರು, ಧರ್ಮ ರಕ್ಷಕರ ಬಗ್ಗೆ ನಮ್ಮ ಮಕ್ಕಳು, ಯುವ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕು ಎಂದು ಸತೀಶ್ ಪೂಜಾರಿ ಮನವಿ ಮಾಡಿದರು.
ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿ ಪೂರ್ವಿಕ ಬೆಳ್ಳಿಯಪ್ಪ ಕನ್ನಡಿಗರು. ಗದಗ ಜಿಲ್ಲೆಯ ಸೊರಟೂರು ಮೂಲ ದವರು. ಬರ ಹಿನ್ನೆಲೆಯಲ್ಲಿ ಬೆಳ್ಳಿಯಪ್ಪ ಮಹಾರಾಷ್ಟ್ರಕ್ಕೆ ತೆರಳುತ್ತಾರೆ. ಅಲ್ಲಿಂದ ನಾಲ್ಕನೇ ತಲೆಮಾರಿನವರೇ ಶಿವಾಜಿ ಮಹಾರಾಜರು. ಶಿವಾಜಿ ಮಹಾರಾಜರು ಕೇವಲ ಎಲ್ಲಾ ಜಾತಿ, ಧರ್ಮೀಯರ ಬಗ್ಗೆ ಸಹಾನುಭೂತಿ ಹೊಂದಿದ್ದರು. ಶಿವಾಜಿ ಮಹಾರಾಜರ ಖಾಸಾ ಪಡೆಯಲ್ಲಿ ಪಠಾಣರೂ ಇದ್ದರು ಎಂದರು.
ಕುವೆಂಪು ಕನ್ನಡ ಸಂಘದ ಮಂಜುನಾಥ ರಾವ್ ಜಾಧವ್, ಅರಣಿ ತಿಮ್ಮಣ್ಣ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ವೀರಪ್ಪ ಸಾವಂತ್, ಆನಂದಪ್ಪ ಕುರಿಯವರ್, ಭರಣಿ ಹೊಟೆಲ್ ಮಾಲೀಕ ಪರಶುರಾಮರಾವ್ ಸಾಳಂಕೆ, ರವೀಂದ್ರನಾಥ ಡಿ.ಅವತಾಡೆ, ಬಾಬುರಾವ್ ಡಿ.ಅವತಾಡೆ, ವಕೀಲ ಶಂಕರರಾವ್ ಎಂ.ಜಾಧವ್, ಲಕ್ಷ್ಮಿಬಾಯಿ ಚಂದ್ರ ಶೇಖರ, ಅನ್ನಪೂರ್ಣ ರವೀಂದ್ರನಾಥ, ರೇಖಾ ಬಾಬುರಾವ್, ಭೂಮಿಕಾ ಬಿ.ಅವತಾಡೆ, ರಾಘವೇಂದ್ರ ಸಿ.ಕಂಚಿಕೇರಿ, ಸೌಮ್ಯ ರಾಘವೇಂದ್ರ, ಜಗದೀಶ ಕುಮಾರ ಪಿಸೆ, ಸಿದ್ದೇಶ, ಅಣ್ಣೇಶ ರಾವ್, ಶ್ರೀನಿವಾಸ ಕಲ್ಪತರು, ಶ್ರೀಧರ್ ರಾವ್ ಅವತಾಡೆ, ವಿಕಾಸ್ ಈ.ಇಟಗಿ, ವೆಂಕಟೇಶ ಲಲ್ಯಾ, ಜೆ.ಪಿ.ದೀಪಕ್, ಬಿ.ಟಿ.ಲೋಕೇಶ, ಆಟೋ ಬಸವರಾಜ, ಧರ್ಮರಾಜ, ನಾಗೇಶ, ಬಿ.ಮಂಜುನಾಥ ಇತರರು ಇದ್ದರು.