ಮಲೇಬೆನ್ನೂರು, ಫೆ. 23 – ಉಕ್ಕಡಗಾತ್ರಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ 1 ಲಕ್ಷ ರೂ. ವೆಚ್ಚದಲ್ಲಿ ಸುಣ್ಣ-ಬಣ್ಣ ಬಳಿಸಿ ಗಮನ ಸೆಳೆದಿದೆ.
ಈ ವೇಳೆ ಮಾತನಾಡಿದ ಟ್ರಸ್ಟಿನ ಮುಖ್ಯಸ್ಥರಾದ ಅರುಣಾ ದಿವಾಕರ್ ಅವರು, ದುಸ್ಥಿತಿಯಲ್ಲಿರುವ ಶಾಲಾ ಪರಿಸರವನ್ನು ಅಭಿವೃದ್ಧಿ ಹಾಗೂ ಉನ್ನತೀಕರಣಗೊಳಿಸಿದಾಗ ಮಾತ್ರ ಶಿಕ್ಷಣದ ಸಬಲೀಕರಣ ಆಗಲಿದೆ ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ಮಹಾಂತಯ್ಯ ಚೋಗಚಿಕೊಪ್ಪ ಮಾತನಾಡಿ, ಈ ಟ್ರಸ್ಟಿನ ವತಿಯಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಕಳೆದ 5 ವರ್ಷಗಳಿಂದ ನೋಟ್ ಪುಸ್ತಕ, ಬ್ಯಾಗ್, ಲೇಖನ ಸಾಮಗ್ರಿ ಹಾಗೂ ನಲಿ-ಕಲಿ ಮಕ್ಕಳಿಗೆ ಆಸನದ ವ್ಯವಸ್ಥೆ ಸೇರಿದಂತೆ ಹಲವು ಶಾಲೆಗಳಿಗೆ ಶೌಚಾಲಯವನ್ನೂ ನಿರ್ಮಿಸಿರುವ ಇವರ ಕಾರ್ಯ ಶ್ಲ್ಯಾಘನೀಯವಾಗಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಜಿ. ಚಂದ್ರಶೇಖರ್, ಗ್ರಾ.ಪಂ ಉಪಾಧ್ಯಕ್ಷ ಜಿಗಳಿ ಚಂದ್ರಗೌಡ, ಸದಸ್ಯ ಶಂಕ್ರಪ್ಪ ಕಮದೋಡ್, ಗ್ರಾಮಸ್ಥರಾದ ಸಿದ್ದಪ್ಪ ಪೂಜಾರ್, ನಾಗರಾಜ್ ಪೂಜಾರ್, ಎಸ್. ನಾಗರಾಜ್, ವಿವಿಧ ಶಾಲೆಯ ಶಿಕ್ಷಕರಾದ ಶಶಿಕುಮಾರ್ ಮರಡಿ ಕ್ಯಾಂಪ್, ಆನಂದ ಭೂತ ರೆಡ್ಡಿ, ಪ್ರವೀಣ್ ಕುಮಾರ್ ಸೇರಿದಂತೆ ಶಾಲೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.