ದಾವಣಗೆರೆ, ಫೆ. 23- ಸರ್ಕಾರವು ಕಾಲ ಕಾಲಕ್ಕೆ ವಿಧಿಸುವ ವಿವಿಧ ರೂಪದ ತೆರಿಗೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಉಂಟು ಮಾಡುವ ಸದುದ್ದೇಶದಿಂದ ದಾವಣಗೆೆರೆ ಜಿಲ್ಲಾ ತೆರಿಗೆ ಪಾವತಿದಾರರ ಸಂಘವನ್ನು ಅಸ್ಥಿತ್ವಕ್ಕೆ ತರಲಾಗಿದೆ ಎಂದು ಸಂಘ ಗೌರವಾಧ್ಯಕ್ಷ ಎಸ್.ಟಿ. ಕುಸುಮ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರ ಕಾಲ ಕಾಲಕ್ಕೆ ವಿವಿಧ ರೀತಿಯ ತೆರಿಗೆ ವಿಧಿಸುವ, ತೆರಿಗೆ ಏರಿಕೆಯ ಬಿಸಿ ಜನಸಾಮಾನ್ಯರಿಂದ ಹಿಡಿದು ಎಲ್ಲಾ ವರ್ಗದವರ ಮೇಲೂ ಪ್ರಭಾವ ಬೀರುತ್ತದೆ. ತೆರಿಗೆ ಪಾವತಿದಾರರು ತಮ್ಮ ಹಕ್ಕುಗಳಂತೆ ಕರ್ತವ್ಯವೂ ಮುಖ್ಯ ಎಂಬುದನ್ನು ಸಾರ್ವಜನಿಕರಲ್ಲಿ ಅರಿವುಂಟು ಮಾಡುವುದು ಸಂಘದ ಉದ್ದೇಶವಾಗಿದೆ ಎಂದರು.
ನೀತಿ ನಿಯಮಗಳಿಲ್ಲದೇ, ವಿವಿಧ ವಲಯಗಳ ಸಲಹೆ ಪಡೆಯದೇ ತೆರಿಗೆ ಏರಿಕೆ ಕ್ರಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಸರ್ಕಾರದ ಗಮನಕ್ಕೂ ತಂದು ಪರಿಹಾರಕ್ಕೆ ಪ್ರಯತ್ನಿಸುವುದು ನಮ್ಮ ತೆರಿಗೆ ನಮ್ಮ ಹಕ್ಕು. ಅದರು ಸದ್ಬಳಕೆಯ ವಿಚಾರವಾಗಿ ಜನ ಸಾಮಾನ್ಯರಿಗೂ ಅರಿವು ಉಂಟು ಮಾಡಿ, ಸರ್ಕಾರದ ಗಮನಕ್ಕೂ ತರುವುದು. ಈಗಾಗಲೇ ಅಸ್ಥಿತ್ವದಲ್ಲಿರುವ ಇದೇ ಉದ್ದೇಶ ಹೊಂದಿರುವ ರಾಜ್ಯ ಅಥವಾ ರಾಷ್ಟ್ರ ಸಂಸ್ಥೆಗಳೊಂದಿಗೆ ರಾಜ್ಯ ಅಥವಾ ರಾಷ್ಟ್ರ ಸಂಸ್ಥೆಗಳೊಂದಿಗೆ ಸಮಭಾಗಿಗಳಾಗುವುದು ಎಂದರು.
ತೆರಿಗೆ ಹೊರೆಯನ್ನು ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರದ ಗಮನಕ್ಕೆ ತರುವುದು ಮತ್ತು ಕಾನೂನು ಹೋರಾಟ ಮಾಡುವುದು. ಸರ್ಕಾರದ ಆಡಳಿತ ಯಂತ್ರವು ಸುಸೂತ್ರವಾಗಿ ಸಾಗಲು ಜನರ ಸಹಕಾರವೂ ಕೂಡ ಮಹತ್ವದ್ದು ಎಂಬ ಅಂಶವನ್ನು ಜನಸಾಮಾನ್ಯರಿಗೆ ಅರಿಯುವಂತೆ ಸಂಘವು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿ ಕಾರಿಗಳಾದ ಎಂ.ಸಿ. ವಿಜಯಕುಮಾರ್, ಹೆಚ್. ಮಹಬಲೇಶ್ವರ್, ಬಸಪ್ಪ, ಬಿ.ಪಿ. ಗಂಗಾಧರಪ್ಪ, ಡಿ.ವಿ. ಪ್ರಕಾಶ್, ಎಸ್.ಆರ್.ಮಂಜಪ್ಪ, ವಿನಾಯಕ ರಾನಡೆ, ಗುರುರಾಜ ಭಾಗವತ, ಸಂತೋಷ್ ಉಪಸ್ಥಿತರಿದ್ದರು.